Publish Date: Tue, 16 Jan 2024 (11:28 IST)
Updated Date: Tue, 16 Jan 2024 (11:33 IST)
ಬೆಂಗಳೂರು: ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ ಕುಮಾರ್ ಹೆಗ್ಡೆ ಮತ್ತೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೊನ್ನೆಯಷ್ಟೇ ಅನಂತ್ ಕುಮಾರ್ ಹೆಗ್ಡೆ ಏಕವಚನದಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಬಿಜೆಪಿ ನಾಯಕರೂ ಕೆಲವರು ಅನಂತ ಕುಮಾರ್ ಹೆಗ್ಡೆ ಹೇಳಿಕೆಗಳನ್ನು ವಿರೋಧಿಸಿದ್ದರು. ಇದು ಪಕ್ಷದ ಹೇಳಿಕೆಯಲ್ಲ ಎಂದು ಅಂತರ ಕಾಯ್ದುಕೊಂಡಿದ್ದಾರೆ.
ಅನಂತಕುಮಾರ್ ಹೆಗ್ಡೆಗೆ ತಿರುಗೇಟು ನೀಡಿದ್ದ ಸಿದ್ದರಾಮಯ್ಯ ಸಂಸ್ಕೃತಿ ಇಲ್ಲದ ಮನುಷ್ಯ ಎಂದು ವಾಗ್ದಾಳಿ ನಡೆಸಿದ್ದರು. ಅದಕ್ಕೆ ತಿರುಗೇಟು ನೀಡಿರುವ ಅನಂತಕುಮಾರ್ ಹೆಗ್ಡೆ, ಸಂಸ್ಕೃತಿ, ಸಭ್ಯತೆ ಎಂದರೆ ಏನು ಎಂದು ನಾನು ಸಿದ್ದರಾಮಯ್ಯಗೆ ಪಾಠ ಮಾಡ್ತೀನಿ. ಯಾರಿಗೆ ಯಾವ ಭಾಷೆಯಲ್ಲಿ ಹೇಳಬೇಕು ಅದೇ ಭಾಷೆಯಲ್ಲಿ ಹೇಳಬೇಕು. ಸಭ್ಯತೆ ಅಂದರೆ ಏನು ಎಂದು ಮೊದಲು ಅವರು ತಿಳಿದುಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಮೊದಲು ಮೋದಿಯವರಿಗೆ ಸಿದ್ದರಾಮಯ್ಯ ಮಾಸ್ ಮರ್ಡರರ್ ಎಂದಿದ್ದರು. ಅವರಿಗೊಂದು ನ್ಯಾಯ ನಮಗೊಂದು ನ್ಯಾಯನಾ? ಎಂದು ಅನಂತ್ ಪ್ರಶ್ನಿಸಿದ್ದಾರೆ.