ಬೆಂಗಳೂರು: ನಗರದಲ್ಲಿ ಶುಕ್ರವಾರ ಸ್ಫೋಟದ ಸದ್ದಿನೊಂದಿಗೆ ಭೂಕಂಪನದ ಅನುಭವವಾಗಿದೆ. ಇದರಿಂದ ಜನರು ಕೆಲಕಾಲ ಆಂತಕಗೊಂಡಿದ್ದರು.
ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ಆರ್.ಆರ್. ನಗರ, ಕಗ್ಗಲಿಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 11.50ರಿಂದ 12.15ರ ಸಮಯದಲ್ಲಿ ಶಬ್ದವು ಕೇಳಿಬಂದಿದ್ದು, ಜನರು ಭಯಭೀತರಾಗಿದ್ದರು. ಭಾರಿ ಶಬ್ದದಿಂದ ನಗರದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿತ್ತು.
ಇತ್ತೀಚಿನ ತಿಂಗಳಲ್ಲಿ ಕಲಬುರಗಿ, ವಿಜಯಪುರ, ಕೋಲಾರ ಸೇರಿ ವಿವಿಧ ಜಿಲ್ಲೆಗಳಲ್ಲಿ ಭೂಕಂಪನ ಹಾಗೂ ದೊಡ್ಡ ಶಬ್ದ ಕೇಳಿತ್ತು. ಪದೇ ಪದೇ ಶಬ್ದ ಕೇಳುವುದು ಮಾತ್ರವಲ್ಲದೇ ಮನೆಗಳ ಗೃಹೋಪಯೋಗಿ ವಸ್ತುಗಳು ಬಿದ್ದಿರುವ ಬಗ್ಗೆ ವರದಿಯಾಗಿತ್ತು. ಇದೇ ರೀತಿ ಮಹಾನಗರದಲ್ಲಿ ಆಗಿರುವುದು ಜನರಿಗೆ ಇನ್ನಷ್ಟು ಆತಂಕ ಹೆಚ್ಚಿಸಿದೆ. ಈ ಬಗ್ಗೆ ತಜ್ಞರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕಿದೆ.
ಭೂಕಂಪನದ ಯಾವುದೇ ಮಾಹಿತಿ ದಾಖಲಾಗಿಲ್ಲ:
ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ಆರ್.ಆರ್. ನಗರ, ಕಗ್ಗಲಿಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನದ ಯಾವುದೇ ಮಾಹಿತಿ ದಾಖಲಾಗಿಲ್ಲ. ಭೂಕಂಪ ಮಾಪನ ಸಿಸ್ಮೋಗ್ರಾಫ್ನಲ್ಲಿ ಭೂಕಂಪನವಾದ ಮಾಹಿತಿ ಇಲ್ಲದಿರುವುದರಿಂದ ಭೂಕಂಪನ ಆಗಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಸ್ಪಷ್ಟನೆ ನೀಡಿದೆ.