ಉಡುಪಿ:
ಕಳೆದ ಮೂರು ವರ್ಷಗಳಿಂದ ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ7 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಆರಿಸಿಕೊಂಡು ಬಂದಿದ್ದ ಬಾಂಗ್ಲಾದೇಶೀಯರನ್ನು ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣ ಬಳಿ ವಶಕ್ಕೆ ಪಡೆದಿದ್ದಾರೆ. ಹಕೀಂ ಅಲಿ, ಸುಜೋನ್, ಇಸ್ಮಾಯಿಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ಕಾಜೋಲ್, ಉಸ್ಮಾನ್ ಬಂಧಿತರು. ಆರೋಪಿಗಳ ಪೈಕಿ ಉಸ್ಮಾನ್ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದ. ಆರೋಪಿಗಳು ಸಿಕ್ಕಿಂನಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದರು.
ಬಂಧನಕ್ಕೆ ಒಳಗಾಗಿರುವ ಮಾಣಿಕ್ ಹುಸೈನ್ ನಕಲಿ ಪಾಸ್‌ಪೋರ್ಟ್ ಬಳಸಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈ ಪರಾರಿಯಾಗಲು ಯತ್ನಿಸಿದ್ದ. ವಿಮಾನ ನಿಲ್ದಾಣದಲ್ಲಿ ದಾಖಲಾತಿ ಪರಿಶೀಲಿಸುವ ಸಂದರ್ಭದಲ್ಲಿ ಅನುಮಾನಗೊಂಡ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಆತ ಅಕ್ರಮವಾಗಿ ಬಾಂಗ್ಲಾದೇಶದಿಂದ ನುಸುಳಿ ನಕಲಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಪಡೆದ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ವಿಮಾನ ನಿಲ್ದಾಣದ ಅಧಿಕಾರಿಗಳು ಈತನ ಬಗ್ಗೆ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ ನೀಡಿದ ಮಾಹಿತಿ ಆಧಾರದಲ್ಲಿ ಮತ್ತೆ 6 ಮಂದಿಯನ್ನು ಉಡುಪಿಯ ಮಲ್ಪೆ ಪೊಲೀಸರು ಬಂಧಿಸಿದ್ದಾರೆ.