Select Your Language

Notifications

webdunia
webdunia
webdunia
webdunia

ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ: ವಿಧಾನ ಪರಿಷತ್ತಿನಲ್ಲಿ ಕೋಲಾಹಲ

B.R. Ambedkar

Sampriya

ಬೆಳಗಾವಿ , ಗುರುವಾರ, 19 ಡಿಸೆಂಬರ್ 2024 (14:57 IST)
Photo Courtesy X
ಬೆಳಗಾವಿ: ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು  ನೀಡಿರುವ ಹೇಳಿಕೆ ಇಂದು  ವಿಧಾನ ಮಂಡಲದ ಉಭಯ ಸದನಗಳಲ್ಲೂ ಕೋಲಾಹಲ ಸೃಷ್ಟಿಸಿತು.

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಎಂಎಲ್‌ಸಿಗಳು ಭಾರತೀಯ ಸಂವಿಧಾನದ ಶಿಲ್ಪಿಗೆ ಅವಮಾನ ಮಾಡಿದ್ದಾರೆ ಎಂದು ಪರಸ್ಪರ ಆರೋಪಿಸಿದರು. ಆರಂಭದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ್ದ ಸಭಾಪತಿ ಬಸವರಾಜ್ ಹೊರಟ್ಟಿ, ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವರು ಸಮರ್ಥಿಸಿಕೊಳ್ಳಲು ಸದನದಲ್ಲಿ ಇಲ್ಲವಾದ್ದರಿಂದ ಚರ್ಚೆಗೆ ಅವಕಾಶ ನೀಡಲಾಗದು ಎಂದರು.

ಕಾಂಗ್ರೆಸ್‌ನ ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್‌ ಅವರು ಅಂಬೇಡ್ಕರ್‌ ಭಾವಚಿತ್ರ ಹಿಡಿದು ವಿಷಯ ಪ್ರಸ್ತಾಪಿಸಲು ಯತ್ನಿಸಿದಾಗ ಸಭಾಪತಿ ಹೊರಟ್ಟಿ ಅವರು, ಪ್ರಶ್ನೋತ್ತರ ಅವಧಿಯ ನಂತರ ಚರ್ಚೆ ನಡೆಸೋಣ ಎಂದರು. ಸಂವಿಧಾನ ರಚಿಸಿದ ವ್ಯಕ್ತಿಗೆ ಅಪಮಾನ ಮಾಡಲಾಗಿದೆ, ಹೀಗಾಗಿ ಪ್ರಶ್ನೋತ್ತರ ಅವಧಿಗೂ ಮುನ್ನ ಚರ್ಚೆ ನಡೆಸಿದರೆ ಒಳಿತು ಎಂದು ಹರಿಪ್ರಸಾದ್ ಪಟ್ಟು ಹಿಡಿದರು.

ಅಂಬೇಡ್ಕರ್ ಬದುಕಿದ್ದಾಗ ಯಾರು ಎಷ್ಟು ಅವಮಾನ ಮಾಡಿದ್ದಾರೆ, ಸತ್ತಾಗ ಯಾರು ಎಷ್ಟು ಅವಮಾನ ಮಾಡಿದ್ದಾರೆ ಎಂಬುದನ್ನು ಚರ್ಚಿಸೋಣ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ತಿರುಗೇಟು ನೀಡಿದರು.

ಸಚಿವರಾದ ಬೋಸರಾಜು, ಜಿ.ಪರಮೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಹಳೆ ಕಥೆ ಬಿಡಿ, ಈಗ ಏನಾಗಿದೆ ಎಂದು ಚರ್ಚಿಸಿ ಎಂದರು. ಇದಕ್ಕೆ ತಿರುಗೇಟು ನೀಡಿದ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾ ಅವರು ಅಂಬೇಡ್ಕರ್ ಅವರನ್ನು ಅವಮಾನಿಸಿಲ್ಲ, ಬದಲಿಗೆ ಕಾಂಗ್ರೆಸ್ ಹೇಗೆ ಅವಮಾನ ಮಾಡಿದೆ ಎಂದು ಹೇಳಿದ್ದಾರೆ.

ಪ್ರಶ್ನೋತ್ತರ ಅವಧಿಯ ನಂತರ, ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಮತ್ತೊಮ್ಮೆ ವಿಷಯ ಪ್ರಸ್ತಾಪಿಸಿದರು, ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದಿದ್ದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಭಿತ್ತಿಪತ್ರಗಳನ್ನು ಹಿಡಿದು ನಿಂತಿದ್ದು, ಎರಡೂ ಕಡೆಯವರ ನಡುವೆ ವಾಗ್ವಾದ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು. ಎರಡೂ ಕಡೆಯವರನ್ನು ಸಮಾಧಾನಪಡಿಸಿ ಕಲಾಪ ಮುಂದುವರಿಸುವ ಪ್ರಯತ್ನ ವಿಫಲವಾದ ಕಾರಣ ಸಭಾಪತಿ ಹೊರಟ್ಟಿ ಸದನವನ್ನು ಕೆಲಕಾಲ ಮುಂದೂಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ಪಾಕ್‌, 159 ಬಾಂಗ್ಲಾ ಪ್ರಜೆಗಳು ವಶಕ್ಕೆ: ಪರಮೇಶ್ವರ್‌