Select Your Language

Notifications

webdunia
webdunia
webdunia
webdunia

ಚುನಾವಣೆ ನಡೆದರೆ ಎಎಪಿಗೆ ಗೆಲುವು ನಿಶ್ಚಿತ: ಪೃಥ್ವಿ ರೆಡ್ಡಿ

ಚುನಾವಣೆ ನಡೆದರೆ ಎಎಪಿಗೆ ಗೆಲುವು ನಿಶ್ಚಿತ: ಪೃಥ್ವಿ ರೆಡ್ಡಿ
bengaluru , ಶುಕ್ರವಾರ, 20 ಮೇ 2022 (15:28 IST)
ವಾರ್ಡ್‌ ಪುನರ್‌ ವಿಂಗಡನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ, ಎಂಟು ವಾರಗಳೊಳಗೆ ಬಿಬಿಎಂಪಿ ಚುನಾವಣೆಗೆ ಅಧಿಸೂಚನೆ ಹೊರಡಿಸಬೇಕೆಂಬ ಸುಪ್ರೀಂ ಕೋರ್ಟ್‌ ಆದೇಶವನ್ನು ಆಮ್‌ ಆದ್ಮಿ ಪಾರ್ಟಿ ಸ್ವಾಗತಿಸಿದ್ದು, ಅಭೂತಪೂರ್ವ ಬಹುಮತದೊಂದಿಗೆ ಪಕ್ಷವು ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್‌ ತೀರ್ಪು ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “2020ರಲ್ಲೇ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆಯು ನಾನಾ ಕಾರಣಗಳಿಗೆ ಮುಂದೂಡಲ್ಪಟ್ಟಿತ್ತು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಆಡಳಿತಾರೂಢ ಬಿಜೆಪಿ ಕೂಡ ಚುನಾವಣೆಯನ್ನು ಮುಂದೂಡಲು ಬೇರೆಬೇರೆ ಕುತಂತ್ರ ಮಾಡುತ್ತಿತ್ತು. ಚುನಾವಣೆ ನಡೆಯದೇ ಕಾರ್ಪೋರೇಟರ್‌ ಇಲ್ಲದ್ದರಿಂದ ಬೆಂಗಳೂರಿನ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್‌ ದಂಧೆಯಿಂದಾಗಿ ರಸ್ತೆಗಳು ಶೋಚನೀಯ ಸ್ಥಿತಿ ತಲುಪಿವೆ. ಮನೆಗಳಿಗೆ ಮಳೆ ನೀರು ನುಗ್ಗುತ್ತಿದ್ದರೂ, ಜವಾಬ್ದಾರಿ ಹೊರುವವರು ಇಲ್ಲವಾಗಿದೆ” ಎಂದು ಹೇಳಿದರು.
“ಈಗ ಸುಪ್ರೀಂ ಕೋರ್ಟ್‌ ಆದೇಶ ನೀಡಿರುವುದರಿಂದ, ಸದ್ಯದಲ್ಲೇ ಚುನಾವಣೆ ನಡೆಯುವ ವಿಶ್ವಾಸವಿದೆ. ಚುನಾವಣೆ ಎದುರಿಸಲು ಆಮ್‌ ಆದ್ಮಿ ಪಾರ್ಟಿಯು ಸಂಪೂರ್ಣ ಸಿದ್ಧವಾಗಿದೆ. ಪಕ್ಷವು ಭರ್ಜರಿ ಬಹುಮತದೊಂದಿಗೆ ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ಎಲ್ಲ ವಾರ್ಡ್‌ಗಳಲ್ಲೂ ಪಕ್ಷಕ್ಕೆ ಕಾರ್ಯಕರ್ತರು, ಮುಖಂಡರು ಇದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಪಕ್ಷದ ಸಿದ್ಧಾಂತಗಳು ಹಾಗೂ ದೆಹಲಿಯ ಕೇಜ್ರಿವಾಲ್‌ ಆಡಳಿತವನ್ನು ಗಮನಿಸುತ್ತಿರುವ ಅಸಂಖ್ಯಾತ ಬೆಂಬಲಿಗರು ಬೆಂಗಳೂರಿನಾದ್ಯಂತ ಇದ್ದಾರೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಿಂದ ದುರಾಡಳಿತದಿಂದ ಬೆಂಗಳೂರಿನ ಜನರು ರೋಸಿ ಹೋಗಿದ್ದು, ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಎಎಪಿಯನ್ನು ಬೆಂಬಲಿಸಲಿದ್ದಾರೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
“ಬೆಂಗಳೂರಿನ ಜನರು ಆದಾಯ ತೆರಿಗೆ, ಜಿಎಸ್‌ಟಿ, ಆಸ್ತಿ ತೆರಿಗೆ ಸೇರಿದಂತೆ ವಿವಿಧ ರೀತಿಯ ತೆರಿಗೆಯನ್ನು ಕಟ್ಟುತ್ತಿದ್ದಾರೆ. ಆದರೆ ಅವರಿಗೆ ಅದಕ್ಕೆ ಪ್ರತಿಯಾಗಿ ಗುಣಮಟ್ಟದ ಮೂಲಸೌಕರ್ಯಗಳು ಸಿಗುತ್ತಿಲ್ಲ. ಅವರು ಕಟ್ಟುತ್ತಿರುವ ತೆರಿಗೆ ಬಿಜೆಪಿಯಂತಹ ಭ್ರಷ್ಟ ಪಕ್ಷಗಳ ಜನಪ್ರತಿನಿಧಿಗಳ ಜೇಬು ಸೇರುತ್ತಿದೆ. ಆಮ್‌ ಆದ್ಮಿ ಪಾರ್ಟಿಯೊಂದೇ ಜನರ ಒಂದೊಂದು ರೂಪಾಯಿ ತೆರಿಗೆಯನ್ನು ಜನರ ಒಳಿತಿಗೆ ಬಳಸುತ್ತದೆ. ಇದನ್ನು ದೆಹಲಿಯಲ್ಲಿ ನಾವು ಸಾಧಿಸಿ ತೋರಿಸಿದ್ದೇವೆ. ಈ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ಪಕ್ಷಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಲಾಲೂ ಪ್ರಸಾದ್ ಗೆ ಮತ್ತೆ ಸಂಕಷ್ಟ: ಸಿಬಿಐನಿಂದ ಹೊಸ ಕೇಸ್ ದಾಖಲು!