Select Your Language

Notifications

webdunia
webdunia
webdunia
Sunday, 13 April 2025
webdunia

ರಾತ್ರಿ ಕೆಲಸ ಮುಗಿಯುತ್ತಿದ್ದಂತೆ 10 ಕಿಮೀ ಓಡಿಕೊಂಡೇ ಹೋಗಿ ಮನೆ ಸೇರುವ ಯುವಕ

young man
bangalore , ಸೋಮವಾರ, 21 ಮಾರ್ಚ್ 2022 (19:23 IST)
ಅಂಗಿ, ಚಡ್ಡಿ ಬೆನ್ನಿಗೊಂದು ಬ್ಯಾಗ್​ ಹಾಕಿಕೊಂಡ ಯುವಕನೊಬ್ಬ ಮಧ್ಯರಾತ್ರಿ ನೊಯ್ಡಾದ ರಸ್ತೆಯಲ್ಲಿ ಓಡುವ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಈ ಯುವಕ ರಾತ್ರಿ ಕೆಲಸ ಮುಗಿಸಿ ವಾಪಸ್​ ಮನೆಗೆ ಹೋಗುವಾಗ ಹೀಗೆ ಓಡಿಕೊಂಡೇ ಹೋಗುತ್ತಾನಂತೆ. ಅದಕ್ಕೆ ಒಂದು ಕಾರಣವೂ ಇದೆ. ಹುಡುಗ ಓಡುತ್ತ ಹೋಗುವ ವಿಡಿಯೋವನ್ನು ಸಿನಿಮಾ ನಿರ್ಮಾಪಕ, ಲೇಖಕ ವಿನೋದ್​ ಕಪ್ರಿ ತಮ್ಮ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ವಿನೋದ್​ ಕಪ್ರಿ ಕಾರಿನಲ್ಲಿ ಕುಳಿತೇ, ಓಡುತ್ತಿದ್ದ ಹುಡುಗನ ಜತೆ ಸಾಗುತ್ತ ಆತನನ್ನು ಸಂದರ್ಶಿಸಿದ್ದಾರೆ. ಬಾ, ನಾನು ನಿನ್ನ ಮನೆಗೆ ಡ್ರಾಪ್​ ಮಾಡುತ್ತೇನೆ, ಯಾಕೆ ಹೀಗೆ ಈ ರಾತ್ರಿಯಲ್ಲಿ ಓಡಿ ಹೋಗುತ್ತಿದ್ದೀಯಾ ಎಂದು ಕೇಳಿದ್ದಕ್ಕೆ, ಆ ಹುಡುಗ ತಿರುಗಿ ನೀಡಿದ ಉತ್ತರಕ್ಕೆ ವಿನೋದ್ ಕಪ್ರಿ ಮಾತ್ರವಲ್ಲ, ಇದೀಗ ನೆಟ್ಟಿಗರೂ ಫುಲ್​ ಫಿದಾ ಆಗಿದ್ದಾರೆ.
 
ಅಂದಹಾಗೆ ಯುವಕನ ಹೆಸರು ಪ್ರದೀಪ್​ ಮೆಹ್ರಾ. ಮೊದಲು ಮೆಹ್ರಾ ಹಿಂದಿರುಗಿ ತನ್ನನ್ನೊಂದು ಕಾರು ಹಿಂಬಾಲಿಸುತ್ತಿದೆ ಎಂಬುದನ್ನು ನೋಡುವುದಿಲ್ಲ. ಒಂದೇ ಸಮ ಓಡುತ್ತಲೇ ಹೋಗುತ್ತಿರುತ್ತಾರೆ. ವಿನೋದ್​ ಕಪ್ರಿ ಹುಡುಗನಿಗೆ ಸಮಾನಾಂತರವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿ, ಬಾ ನಿನ್ನನ್ನು ಮನೆಗೆ ಬಿಡುತ್ತೇನೆ ಎಂದರೆ ಬೇಡ, ನನಗೆ ಓಡಬೇಕು ಎನ್ನುತ್ತಾರೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಆಗ ವಿನೋದ್ ಕಪ್ರಿ, ಯಾಕೆ ಓಡಬೇಕು ಹೀಗೆ ಎಂದು ಕೇಳಿದಾಗ, ನಾನು ಸೇನೆಯನ್ನು ಸೇರಬೇಕು. ನನಗೆ ಹಗಲಿಗೆ, ಬೆಳಗ್ಗೆ ಓಡಲು ಸಮಯ ಸಿಗುವುದಿಲ್ಲ. ಹೀಗಾಗಿ ಕೆಲಸ ಮುಗಿಸಿ ಮಧ್ಯರಾತ್ರಿ ಓಡಿಯೇ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.ಅದನ್ನು ಕೇಳಿ ವಿನೋದ್​ ಕಪ್ರಿ ಸಿಕ್ಕಾಪಟೆ ಖುಷಿಯಾಗಿದ್ದಾರೆ. ಹಾಗೇ, ಯುವಕನ ಬಳಿ ಆತನ ಬಗ್ಗೆ ವಿಚಾರಿಸಿದ್ದಾರೆ. ವಿನೋದ್​ ಕೇಳಿದ ಎಲ್ಲ ಪ್ರಶ್ನೆಗೂ ಯುವಕ ಓಡುತ್ತಲೇ ಉತ್ತರ ಕೊಟ್ಟಿದ್ದಾರೆ. ತಾವು ನೊಯ್ಡಾದ ಸೆಕ್ಟರ್​ 16ರಿಂದ ಬರೋಲಾದಲ್ಲಿರುವ ಮನೆಗೆ 10 ಕಿಮೀ ದೂರ ಪ್ರತಿದಿನವೂ ಓಡಿಕೊಂಡೇ ಹೋಗುವುದಾಗಿ ಹೇಳಿದ್ದಾರೆ. ಸದ್ಯ ನಾನು ನನ್ನ ಅಣ್ಣನೊಂದಿಗೆ ಇದ್ದೇನೆ, ತಾಯಿಗೆ ಹುಷಾರಿಲ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದನ್ನೂ ವಿನೋದ್​ ಕಪ್ರಿಯವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದ್ದಾರೆ. ಊಟ ಆಗಿದೆಯಾ ಎಂದು ಕೇಳಿದ್ದಕ್ಕೆ, ಇಲ್ಲ ಈಗ ನಾನು ಮನೆಗೆ ಹೋಗಿ ಅಡುಗೆ ಮಾಡಬೇಕು ಎನ್ನುತ್ತಾರೆ. ಬಾ ನನ್ನ ಜತೆ, ನನ್ನೊಂದಿಗೆ ಊಟ ಮಾಡು ಎಂದಿದ್ದಕ್ಕೆ, ಇಲ್ಲ ನಾನು ಹಾಗೆ ಮಾಡಿದರೆ ಮನೆಯಲ್ಲಿರುವ ನನ್ನ ಅಣ್ಣ ಹಸಿದುಕೊಂಡೇ ಇರಬೇಕಾಗುತ್ತದೆ ಎಂದು ಪ್ರದೀಪ್ ಹೇಳುತ್ತಾರೆ. ಯಾಕೆ ಅವರು ಅಡುಗೆ ಮಾಡುವುದಿಲ್ಲವಾ ಎಂದು ವಿನೋದ್​ ಕಪ್ರಿ ಕೇಳಿದ್ದಕ್ಕೆ, ಇಲ್ಲ ಅವರಿಗೆ ಈಗ ರಾತ್ರಿ ಡ್ಯೂಟಿ ಇದೆ. ನಾನು ಹೋಗಿ ಅಡುಗೆ ಮಾಡಬೇಕು ಎಂಬ ಉತ್ತರವನ್ನು ನೀವು ಕೇಳಬಹುದು.
 
ಆ ವಿಡಿಯೋವನ್ನು ಒಂದು ಚೆಂದನೆಯ ಕ್ಯಾಪ್ಷನ್​ ಜತೆ ಸೋಷಿಯಲ್ ಮೀಡಿಯಾಕ್ಕೆ ಪೋಸ್ಟ್ ಮಾಡಿದ ವಿನೋದ್​ ಕಪ್ರಿ, ಪ್ರದೀಪ್​ ಮೆಹ್ರಾರರನ್ನು ಶುದ್ಧವಾದ ಬಂಗಾರ (Pure Gold) ಎಂದಿದ್ದಾರೆ. ಅಷ್ಟೇ ಅಲ್ಲ, ಕಾರಿನಲ್ಲೇ ಕುಳಿತು ವಿಡಿಯೋ ಶೇರ್​ ಮಾಡಿದ ಅವರು ಮತ್ತೆ ಪ್ರದೀಪ್​ ಬಳಿ, ನೀನು ಓಡುತ್ತಿರುವ ವಿಡಿಯೋ ಸಿಕ್ಕಾಪಟೆ ವೈರಲ್​ ಆಗುತ್ತಿದೆ ಎನ್ನುತ್ತಾರೆ. ಆಗ ನಗುವ ಪ್ರದೀಪ್​, ಯಾರು ನನ್ನನ್ನು ಗುರುತಿಸುತ್ತಾರೆ? ಇರಲಿ ವೈರಲ್​ ಆಗಲಿ ಯಾಕೆಂದರೆ ನಾನೇನೂ ತಪ್ಪು ಮಾಡುತ್ತಿಲ್ಲ ಎನ್ನುತ್ತಾರೆ. ಸದ್ಯ ವಿಡಿಯೋವಂತೂ ಭರ್ಜರಿ ವೈರಲ್​ ಆಗುತ್ತಿದೆ. ಅನೇಕ ಜನರು ಇದನ್ನು ಶೇರ್ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಗಟು ಖರೀದಿಗೆ ಡೀಸೆಲ್ ದರ 25 ರೂ. ಏರಿಕೆ; ಪ್ರಮುಖ ನಗರಗಳ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?