Publish Date: Thu, 27 Apr 2023 (09:02 IST)
Updated Date: Thu, 27 Apr 2023 (10:07 IST)
ಬೆಂಗಳೂರು : ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಅನ್ನೋ ಕಾರಣಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜು (60) ಕೊಲೆಯಾದ ವ್ಯಕ್ತಿ, ಆಟೋ ಚಾಲಕನಾಗಿದ್ದ ಮಗ ನೀಲಾಧರ ಕೊಲೆ ಆರೋಪಿಯಾಗಿದ್ದಾನೆ.
ಇಲ್ಲಿನ ಮಾರೇನಹಳ್ಳಿ ಪಿಎಸ್ ಬಡಾವಣೆಯ ಶೆಡ್ವೊಂದರಲ್ಲಿ ಕೊಲೆಯಾದ 15 ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕೇಸ್ ದಾಖಲಿಸಿಕೊಂಡಿದ್ದ ಗೋವಿಂದರಾಜನಗರ ಪೊಲೀಸರು ತನಿಖೆ ನಡೆಸಿದಾಗ ಮಗನಿಂದಲೇ ಕೊಲೆಯಾಗಿರುವುದು ಪತ್ತೆಯಾಗಿದೆ.
ವಿಚಾರಣೆ ವೇಳೆ ನೀಲಾಧರ ತನ್ನ ತಂದೆ ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಅನ್ನೋ ಕಾರಣಕ್ಕೆ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.