Select Your Language

Notifications

webdunia
webdunia
webdunia
webdunia

ನಾವು ಬೀದಿಗಿಳಿದರೆ ನಿಮ್ಮನ್ನು ಮನೆಗೆ ಕಳುಹಿಸಲು ನಮಗೆ ಗೊತ್ತಿದೆ:ಎ.ನಾರಾಯಣಸ್ವಾಮಿ

A Narayanaswamy

Krishnaveni K

ಬೆಂಗಳೂರು , ಶುಕ್ರವಾರ, 1 ಆಗಸ್ಟ್ 2025 (16:41 IST)
ಬೆಂಗಳೂರು: ಕೂಡಲೇ ಒಳಮೀಸಲಾತಿ ಜಾರಿ ಮಾಡದೆ ಇದ್ದಲ್ಲಿ ರಾಜ್ಯ ಸರಕಾರದ ವಿರುದ್ಧ ಮಾದಿಗರಿಂದ ಅಸಹಕಾರ ಚಳವಳಿ ನಡೆಸಲಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅವರು ಎಚ್ಚರಿಸಿದ್ದಾರೆ.

ಒಳಮೀಸಲಾತಿ ಜಾರಿ ಮಾಡಲು ಆಗ್ರಹಿಸಿ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾದಿಗರು ಇನ್ನು ಕಾಯುವುದಿಲ್ಲ; ಓಲೈಕೆಗೆ ಬಗ್ಗುವುದಿಲ್ಲ ಎಂದು ನುಡಿದರು. ಮುಂದಿನ ಚುನಾವಣೆವರೆಗೆ ಕಾಯುವುದಿಲ್ಲ ಎಂದು ತಿಳಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂದು ಹೋರಾಟ ನಡೆಯುತ್ತಿದೆ. ಪಕ್ಷಭೇದ ಮರೆತು ಹೋರಾಟ ನಡೆಯುತ್ತಿದೆ ಎಂದು ವಿವರಿಸಿದರು. ಇದು ಬಿಜೆಪಿ ಹೋರಾಟವಲ್ಲ ಎಂದು ತಿಳಿಸಿದರು. ಕರ್ನಾಟಕ ಸರಕಾರಕ್ಕೆ ಕುರ್ಚಿ ಪ್ರಮುಖವೇ ಅಥವಾ ಸಮಸ್ಯೆಗಳು ಮುಖ್ಯವೇ ಎಂದು ಅವರು ಕೇಳಿದರು. ರಾಜ್ಯ ಸರಕಾರಕ್ಕೆ ಅಭಿವೃದ್ಧಿ ಮುಖ್ಯವೇ ಅಥವಾ ಕುರ್ಚಿ ಮುಖ್ಯವೇ ಎಂದು ಪ್ರಶ್ನೆ ಮಾಡಿದರು.
 
ಮಾದಿಗರಿಗೆ ನ್ಯಾಯ ಲಭಿಸಿಲ್ಲ; ನಮ್ಮ ಸಹನೆಯ ಕಟ್ಟೆ ಒಡೆದಿದೆ. ಇನ್ನು ಕಾಯಲಾಗದು. ನಾವು ಬೀದಿಗಿಳಿದರೆ ನಿಮ್ಮನ್ನು ಮನೆಗೆ ಕಳುಹಿಸಲು ನಮಗೆ ಗೊತ್ತಿದೆ ಎಂದ ಅವರು, 1976ರಿಂದ ಮಾದಿಗರಿಗೆ ಆದ ಅನ್ಯಾಯದ ವರದಿ ಕೊಡಿ ಎಂದರೆ ಮುಖ್ಯ ಕಾರ್ಯದರ್ಶಿ ಸಭೆ ಮಾಡುವುದಿಲ್ಲ ಎಂದು ಟೀಕಿಸಿದರು.
 
ಕೇವಲ ಜನಸಂಖ್ಯೆ ಆಧರಿಸಿ ಮೀಸಲಾತಿ ಕೊಡುವುದಲ್ಲ; ಸುಮಾರು 40 ವರ್ಷಗಳಿಂದ ಆದ ಅನ್ಯಾಯವನ್ನು ಪರಿಗಣಿಸಿ ಮೀಸಲಾತಿ ಕೊಡಬೇಕಿದೆ. ಅನೇಕ ದಶಕಗಳಿಂದ ಆದ ಅನ್ಯಾಯ ಪರಿಗಣಿಸಿ ಹೆಚ್ಚು ಮೀಸಲಾತಿ ಕೊಡದೆ ಇದ್ದರೆ ರಾಜ್ಯದ ಮಾದಿಗರು ಹೋರಾಟಕ್ಕೆ ಸನ್ನದ್ಧರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು. ಎಲ್ಲ ಚುಕ್ತಾ ಮಾಡಿ ಎಂದು ಆಗ್ರಹಿಸಿದರು. ಹಳೆ ಬಾಕಿ ಚುಕ್ತಾ ಮಾಡದೆ ಇದ್ದರೆ, ತೀವ್ರ ಹೋರಾಟ ಸಂಘಟಿಸುವುದಾಗಿ ತಿಳಿಸಿದರು.
 
ಎಲ್ಲೆಡೆ ಹೋರಾಟ ಮಾದಿಗರ ಜಾಗೃತಿಯ ಸಂಕೇತ
ರಾಜ್ಯದ 26 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಹೋರಾಟ ನಡೆಯುತ್ತಿದೆ. ಇದು ಮಾದಿಗರ ಜಾಗೃತಿಯ ಸಂಕೇತ ಎಂದು ಅವರು ವಿಶ್ಲೇಷಿಸಿದರು. ಈ ರಾಜ್ಯದ ಅನೇಕ ಶಾಸಕರು ಮಾದಿಗರ ಮತ ಇಲ್ಲದೇ ಎಂಎಲ್‍ಎ ಆಗಲು ಅಸಾಧ್ಯ ಎಂಬುದನ್ನು ನೆನಪಿಸಲು ಬಯಸುವುದಾಗಿ ಹೇಳಿದರು. ಮಾದಿಗರ ಮತ ಪಡೆದು ವಿಧಾನಸೌಧದ ಮೆಟ್ಟಿಲೇರಿದವರಿಗೆ ನಾಲಿಗೆ ಬಿದ್ದು ಹೋಗಿದೆ ಎಂದು ಟೀಕಿಸಿದರು. ಮಾದಿಗರ ಪರವಾಗಿ ಮಾತನಾಡದ ನೀವು ಯಾವ ಯೋಗ್ಯತೆ ಇಟ್ಟುಕೊಂಡು ಮತ ಕೇಳುತ್ತೀರಿ ಎಂದು ಪ್ರಶ್ನಿಸಿದರು. 

ಈ ದೇಶದ ಮಾದಿಗರಿಗೆ ಮೀಸಲಾತಿ ಕೊಡಬಾರದು ಎಂದಿದೆಯೇ? ಎಂದು ಪ್ರಶ್ನಿಸಿದ ಅವರು, ಜಿಲ್ಲಾ ಪಂಚಾಯಿತಿ ಮತ್ತಿತರ ಸಂಸ್ಥೆಗಳ ಚುನಾವಣೆ ವೇಳೆ ನಾಳೆ, ನಾಳೆ ಮೀಸಲಾತಿ ಎನ್ನುತ್ತಾರೆ. ಸಂವಿಧಾನಕ್ಕೆ ಬೀಗ ಹಾಕಿ ತುರ್ತು ಪರಿಸ್ಥಿತಿ ಘೋಷಿಸಿ  ಪ್ರಧಾನಿಯಾಗಿ ಮುಂದುವರೆಯಲು ನಿಮಗೆ ಅಧಿಕಾರ ಇತ್ತು. ಈ ರಾಜ್ಯದ, ದೇಶದ ಶೋಷಿತ ವರ್ಗದ ಅಸ್ಪøಶ್ಯ ಮಾದಿಗರಿಗೆ ಸ್ವಾತಂತ್ರ್ಯಾನಂತರ ನಿರಂತರ ಅನ್ಯಾಯವಾಗಿದೆ. ಅನೇಕ ಮಾದಿಗರ ಮಕ್ಕಳು ಹಣವಿಲ್ಲದೇ ಎಂ.ಬಿ.ಬಿ.ಎಸ್. ಮಾಡಲಾಗುತ್ತಿಲ್ಲ. ಇದೆಲ್ಲ ನಿಮಗೆ ಅರ್ಥವಾಗುತ್ತದೆಯೇ ಎಂದು ಪ್ರಶ್ನೆ ಮಾಡಿದರು.
 
ಮುಖ್ಯಮಂತ್ರಿಗಳ ಸಮಾಜವಾದ ಎಲ್ಲಿ ಹೋಗಿದೆ?
ಎಲ್ಲರಿಗೂ ನ್ಯಾಯ ಕೊಡುವುದಾಗಿ ಹೇಳುವ ಸಮಾಜವಾದಿ ಮುಖ್ಯಮಂತ್ರಿ ಯಾವುದರ ಚಾಂಪಿಯನ್ ಎಂದು ಕೇಳಿದರು. ಎಲ್ಲ ರಂಗಗಳಲ್ಲೂ ಹಿಂದುಳಿದ ಮಾದಿಗರಿಗೆ ಒಂದೇ ಒಂದು ಯೋಜನೆ ನೀಡಿಲ್ಲ ಎಂದು ಆಕ್ಷೇಪಿಸಿದರು.ಮಾದಿಗರು ಎಲ್ಲ ಕಡೆ ಹಿಂದುಳಿದಿದ್ದಾರೆ. ಎಲ್ಲಿ ಹೋಗಿದೆ ನಿಮ್ಮ ಸಮಾಜವಾದ ಎಂದು ಪ್ರಶ್ನೆ ಮಾಡಿದರು.
 
ಅಸಹಕಾರ ಚಳವಳಿ ಒಂದೇ ಅಲ್ಲ; ಸರಕಾರವನ್ನು ಕಿತ್ತೊಗೆಯುವ ಚಳವಳಿ ನಡೆಸುತ್ತೇವೆ ಎಂದು ಅವರು ತಿಳಿಸಿದರು. ಈ ಚಳವಳಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. 
ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ ಮತ್ತು ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್, ಸಮಾಜದ ಮುಖಂಡರು ಮತ್ತು ಸಂಘಟನೆಗಳ ಪದಾಧಿಕಾರಿಗಳು ಇದ್ದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳದಲ್ಲಿ ಅಗೆಯುವ ಸ್ಥಳದಲ್ಲಿ ಇವರಿಂದಲೇ ಪೊಲೀಸರಿಗೆ ದೊಡ್ಡ ಸಮಸ್ಯೆ