Publish Date: Sun, 03 Apr 2022 (18:49 IST)
Updated Date: Sun, 03 Apr 2022 (18:52 IST)
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹಲವು ವಿಡಿಯೋಗಳು ಮೈ ನಡುಗಿಸುತ್ತವೆ. ಅದರಲ್ಲೊಂದು ಈಗ ವೈರಲ್ ಆಗಿರೋ ಈ ವಿಡಿಯೋ. ದೆಹಲಿಯ ದಯಾಳ್ಪುರ ಎಂಬಲ್ಲಿರುವ ಶೇರ್ಪುರದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಜ್ಞಾನ್ ಸಿಂಗ್ ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪಾಡಿಗೆ ಕೆಲಸ ಮಾಡುತ್ತಿದ್ದ ಕಾನ್ಸ್ಟೆಬಲ್ಗೆ ಹಿಂದಿನಿಂದ ಬಂದ ಗೂಳಿಯೊಂದು ಗುದ್ದಿದೆ. ಅವರಿಗೆ ಗೂಳಿ ಬಂದು ಗುದ್ದುವವರೆಗೂ ಅಲ್ಲಿ ಗೂಳಿ ಇದ್ದಿದ್ದೇ ಗೊತ್ತಿಲ್ಲ. ಅದೆಷ್ಟರ ಮಟ್ಟಿಗೆ ಜೋರಾಗಿ ಗುದ್ದಿದೆಯೆಂದರೆ, ಜ್ಞಾನ್ ಸಿಂಗ್ ಗಾಳಿಯಲ್ಲಿ ಸ್ವಲ್ಪ ದೂರ ಹಾರಿ ಹೋಗಿ ಕೆಳಗೆ ಬಿದ್ದಿದ್ದಾರೆ. ಬಳಿಕ ಅಲ್ಲಿಯೇ ಸುತ್ತಲೂ ಇದ್ದ ಜನರು, ಡ್ಯೂಟಿಯಲ್ಲಿದ್ದ ಇತರ ಪೊಲೀಸರು ಆಗಮಿಸಿ ಜ್ಞಾನ್ ಸಿಂಗ್ರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಪೊಲೀಸ್ ಕಾನ್ಸ್ಟೆಬಲ್ ಜ್ಞಾನ್ ಸಿಂಗ್ ಅವರಿಗೆ ಅದೃಷ್ಟವಶಾತ್ ಹೆಚ್ಚೇನೂ ಅಪಾಯ ಆಗಲಿಲ್ಲ ಎಂದು ಹೇಳಲಾಗಿದ್ದು, ಚಿಕಿತ್ಸೆ ಪಡೆದ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗೆ ಬೀಡಾಡಿ ಗೂಳಿಗಳು ದಾಳಿ ಮಾಡುವುದು ಇದೇ ಮೊದಲೇನೂ ಅಲ್ಲ. ಕಳೆದ ವರ್ಷ ಗುಜರಾತ್ನ ಭಾವನಗರದಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ವ್ಯಕ್ತಿಯೊಬ್ಬನ ಮೇಲೆ ಗೂಳಿ ದಾಳಿ ನಡೆಸಿ ಅವರೂ ಕೂಡ ಗಂಭೀರ ಗಾಯಗೊಂಡಿದ್ದರು.