ಬೆಂಗಳೂರು:ಮೇ-26:ಚಾಟ್ಸ್ ಕೊಡಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದ ಮೂವರು ದುಷ್ಕರ್ಮಿಗಳು 5 ದಿನಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಪೀಣ್ಯಾ 2ನೇ ಹಂತದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಸಂತ್ರಸ್ತ ಬಾಲಕಿಯ ಪಕ್ಕದ ಮನೆಯಲ್ಲಿದ್ದ ಬಾಲಕನೇ ಕುಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿಕೊಂಡ ಆರೋಪಿ ಬಾಲಕಿಯನ್ನು ಸಿನಿಮಾಗೆ ಕರೆದೊಯ್ದು ಅಲ್ಲಿಂದ ಪೀಣ್ಯಾ ಕೈಗಾರಿಕಾ ಪ್ರದೇಶದ ನಿರ್ಜನ ಪ್ರದೇಶದಲ್ಲಿದ್ದ ಕಟ್ಟಡವೊಂದರೊಳೆಗೆ ಕರೆದೊಯ್ದಿದ್ದಾನೆ, ಬಳಿಕ ಬಾಲಕಿಗೆ ಮಾತ್ರೆ ನೀಡಿ ಅತ್ಯಾಚಾರವೆಸಗಿದ್ದಾನೆ.
ಅಲ್ಲದೇ ಸ್ಥಳಕ್ಕೆ ತನ್ನ ಇತರೆ ಇಬ್ಬರು ಸ್ನೇಹಿತರನ್ನು ಕರೆಸಿಕೊಂಡು ಮೂವರೂ ಸೇರಿ ಬಾಲಕಿ ಮೇಲೆ ನಿರಂತರ ಐದು ದಿನಗಳ ಕಾಲ ಅತ್ಯಾಚಾರ ವೆಸಗಿದ್ದಾರೆ. ಬಳಿಕ ಬಾಲಕಿ ಮನೆಗೆ ಬಂದಾಗ ಆಕೆಯ ತಾಯಿ ವಿಚಾರಿಸಿದ್ದು, ಈ ವೇಳೆ ಘಟನೆ ಬಯಲಿಗೆ ಬಂದಿದೆ. ಪ್ರಸ್ತುತ ಮೂವರು ಆರೋಪಿಗಳನ್ನು ಪೀಣ್ಯಾ ಪೊಲೀಸರು ಬಂಧಿಸಿದ್ದು, ಬಂಧಿತರ ಪೈಕಿ ಓರ್ವ ಅಪ್ರಾಪ್ತ ಎಂದು ತಿಳಿದುಬಂದಿದೆ.