ಹೊಸದಿಲ್ಲಿ: ಅರುಣಾಚಲಪ್ರದೇಶದ ಕೆಮಾಂಗ್ ವಲಯದ ಅತಿ ಎತ್ತರದ ಪ್ರದೇಶದಲ್ಲಿ ಫೆಬ್ರವರಿ 6ರಂದು ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ್ದ ಎಲ್ಲ 7 ಮಂದಿ ಯೋಧರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ಹಿಮಪಾತ ಸಂಭವಿಸಿದ ಪ್ರದೇಶದಿಂದ ಯೋಧರ ಮೃತದೇಹಗಳನ್ನು ರ ತೆಗೆಯಲಾಗಿದೆ ಎಂದು ಸೇನೆ ಹೇಳಿದೆ.
ಯೋಧರ ಸಾವಿಗೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅರುಣಾಚಲಪ್ರದೇಶದ ಕೆಮಾಂಗ್ ವಲಯದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಯೋಧರು ಮೃತಪಟ್ಟಿರುವುದು ನನ್ನ ಮನಸ್ಸಿಗೆ ತೀವ್ರ ನೋವು ಉಂಟು ಮಾಡಿದೆ. ದೇಶ ಸೇವೆಯ ಸಂದರ್ಭ ಈ ವೀರ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ನಾನು ಅವರ ಸೇವೆ ಹಾಗೂ ಧೈರ್ಯಕ್ಕೆ ವಂದಿಸುತ್ತೇನೆ. ಮೃತಪಟ್ಟ ಯೋಧರ ಕುಟುಂಬಗಳಿಗೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ಹಾಗೂ ಅರುಣಾಚಲ ಪ್ರದೇಶದ ಸಂಸದ ಕಿರಣ್ ರಿಜಿಜು ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ. ತವಾಂಗ್ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತದ ಬಳಿಕ ಗಸ್ತು ತಂಡದ ಭಾಗವಾಗಿದ್ದ 7 ಮಂದಿ ಯೋಧರು ನಾಪತ್ತೆಯಾಗಿದ್ದರು. ಈ ದುರಂತ ಗಡಿ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ರವಿವಾರ ಸಂಭವಿಸಿದೆ ಎಂದು ಈ ಹಿಂದೆ ದಿರಂಗ್ ಪೊಲೀಸ್ ಠಾಣೆಯ ಉಸ್ತುವಾರಿ ಸ್ಯಾಂಗ್ ತಿನ್ಲೇ ಅವರು ಹೇಳಿದ್ದರು.