Select Your Language

Notifications

webdunia
webdunia
webdunia
webdunia

3 ಕೊಲೆ ಮಾಡಿದ್ದ ಪಾತಕಿ ನೇಣು ಕುಣಿಕೆಯಿಂದ ಬಚಾವ್?

3 ಕೊಲೆ ಮಾಡಿದ್ದ ಪಾತಕಿ ನೇಣು ಕುಣಿಕೆಯಿಂದ ಬಚಾವ್?
ಬೆಂಗಳೂರು , ಸೋಮವಾರ, 28 ಆಗಸ್ಟ್ 2023 (15:19 IST)
ಬೆಂಗಳೂರು : ಇದೊಂದು ಅಪರೂಪದ ಪ್ರಕರಣ. ಕಲಬುರಗಿ ಮೂಲದ ಸಾಯಿಬಣ್ಣ ಎಂಬಾತ ಮೂವರ ಕೊಲೆ ಮಾಡಿದ್ದ ಪಾತಕಿ. ಈತನಿಗೆ ಗಲ್ಲು ಶಿಕ್ಷೆಯಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಸಾಯಿಬಣ್ಣ, ಸುಪ್ರೀಂಕೋರ್ಟ್, ರಾಷ್ಟ್ರಪತಿ ಹಾಗೂ ರಾಜ್ಯಪಾಲ ಮೊರೆ ಹೋಗಿದ್ದರು.
 
ಆದ್ರೆ, ಸಾಯಿಬಣ್ಣ ಸಲ್ಲಿಸಿದ್ದ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿ ಅರ್ಜಿಗಳು ವಜಾಗೊಂಡಿದ್ದವು. ಆದ್ರೆ, ಸಾಲು-ಸಾಲು ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾಗಿದ್ದರಿಂದ ಇದೀಗ ಸಾಯಿವಣ್ಣ ನೇಣಿನ ಕುಣಿಕೆಯಿಂದ ಪಾರಾಗಿದ್ದಾನೆ.

ಹೌದು…ಈತನ ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ 7 ವರ್ಷ 8 ತಿಂಗಳು ವಿಳಂಬ ಜೊತೆಗೆ 70 ವರ್ಷದ ಸಾಯಿಬಣ್ಣ 30 ವರ್ಷದಿಂದ ಜೈಲಿನಲ್ಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್, ಜೀವದಾನ ನೀಡಿದೆ. ಆರೋಪಿಗೆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚರಿದ್ದ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ.

ಸಾಯಿಬಣ್ಣ ಎಂಬಾತ ಮೂವರ ಕೊಲೆ ಮಾಡಿದ ಪಾತಕಿ. ಜನವರಿ 9, 1988 ರಲ್ಲಿ ಸಾಯಿಬಣ್ಣ ತನ್ನ ಪತ್ನಿ ಮಾಲಕವ್ವಳನ ಶೀಲ ಶಂಕಿಸಿ ಕೊಲೆ ಮಾಡಿದ್ದ. ಅಫ್ಜಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪತ್ನಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿರುವಾಗಲೇ ಈತನಿಗೆ ದತ್ತು ಎಂಬ ಮತ್ತೊಬ್ಬ ಕೈದಿಯ ಪರಿಚಯವಾಗಿತ್ತು.

ಇವರ ದಾಂಪತ್ಯಕ್ಕೆ ವಿಜಯಲಕ್ಷ್ಮಿ ಎಂಬ ಪುತ್ರಿಯೂ ಜನಿಸಿದ್ದಳು. ಫೆಬ್ರವರಿ 2, 1993 ರಲ್ಲಿ ಮೊದಲ ಪತ್ನಿಯ ಕೊಲೆ ಆರೋಪ ಸಾಬೀತಾಗಿ ಸಾಯಿಬಣ್ಣ ಮತ್ತೆ ಜೈಲು ಸೇರಿದ್ದ. ಕೋರ್ಟ್ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆಗಸ್ಟ್ 19, 1994 ರಂದು ಒಂದು ತಿಂಗಳ ಪೆರೋಲ್ ಪಡೆದು ಬಿಡುಗಡೆಯಾದ ಸಾಯಿಬಣ್ಣ, ಪೆರೋಲ್ ಅವಧಿ ಇನ್ನೇನು ಮುಗಿಯಬೇಕೆಂಬ ವೇಳೆಯಲ್ಲೇ ಸೆಪ್ಟೆಂಬರ್ 13, 1994 ರಂದು ಎರಡನೇ ಪತ್ನಿ ನಾಗಮ್ಮ ಹಾಗೂ ಪುತ್ರಿ ವಿಜಯಲಕ್ಷ್ಮಿಯನ್ನೂ ಕೊಲೆ ಮಾಡಿದ್ದ,

ಇದನ್ನು ಕಂಡ ಜನ ಅವನನ್ನೂ ಥಳಿಸಿದ್ದರಿಂದ ಆಸ್ಪತ್ರೆ ಸೇರಿದ್ದ ಸಾಯಿಬಣ್ಣನನ್ನು ನಂತರ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು. ಪೆರೋಲ್ ನಲ್ಲಿರುವಾಗಲೇ ಮತ್ತೆರಡು ಕೊಲೆ ಮಾಡಿದ ಪಾತಕಿ ಸಾಯಿಬಣ್ಣನಿಗೆ ಕಲಬುರಗಿಯ ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು.

ಸಾಯಿಬಣ್ಣ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚರವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಸಾಯಿಬಣ್ಣ 30 ವರ್ಷಗಳಿಂದ ಸೆರೆಮನೆಯಲ್ಲಿದ್ದಾನೆ, 2003 ರಿಂದಲೂ ಒಬ್ಬಂಟಿಯಾಗಿ ಸೆರೆಯಲ್ಲಿಡಲಾಗಿದೆ.

ಹೀಗಾಗಿ ಈತನ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವುದೇ ಸೂಕ್ತವೆಂದು ತೀರ್ಪು ನೀಡಿದೆ. ಅಲ್ಲದೇ ಸಾಯಿಬಣ್ಣನೇನಾದರೂ ಜೀವಾವಧಿ ಶಿಕ್ಷೆಯಿಂದ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದರೆ ಅದನ್ನು ಅರ್ಹತೆ ಆಧರಿಸಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೂ ನಿರ್ದೇಶನ ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ತತ್ವ ಸಿದ್ದಾಂತ ಯಾರು ಒಪ್ಪಿಕೊಳ್ತಾರೋ ಅಂಥವರಿಗೆ ಸ್ವಾಗತ ಇದೆ - ಡಿಕೆ ಸುರೇಶ್