Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ 3-4 ಸಚಿವರ ಭೇಟಿ: ಬೊಮ್ಮಾಯಿ

ದೆಹಲಿಯಲ್ಲಿ 3-4 ಸಚಿವರ ಭೇಟಿ: ಬೊಮ್ಮಾಯಿ
ಬೆಂಗಳೂರು , ಮಂಗಳವಾರ, 7 ಸೆಪ್ಟಂಬರ್ 2021 (12:03 IST)
ಬೆಂಗಳೂರು : 'ರಾಜ್ಯದ ವಿವಿಧ ಯೋಜನೆಗಳು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಂಗಳವಾರ (ಸೆ. 7) ಮತ್ತು ಬುಧವಾರ (ಸೆ. 8) 3-4 ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಬೆಳಿಗ್ಗೆ 11.30ರ ವಿಮಾನದಲ್ಲಿ ದೆಹಲಿಗೆ ತೆರಳಲಿರುವ ಅವರು, ಅದಕ್ಕೂ ಮೊದಲು ಆರ್.ಟಿ. ನಗರದಲ್ಲಿರುವ ತಮ್ಮ ನಿವಾಸ ಬಳಿ ಸುದ್ದಿಗಾರರ ಜೊತೆ ಮಾತನಾಡಿದರು.
'ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ಬೇರೆ ಬೇರೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಸ್ತಾವನೆಗಳ ಬಗ್ಗೆ ನಿತಿನ್ ಗಡ್ಕರಿ ಹಾಗೂ ವಸತಿ ಮತ್ತು ಮತ್ತು ನಗರಾಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಹರದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ' ಎಂದರು.
'ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ. ಆದರೆ, ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರ ಮಗಳ ಮದುವೆ ಔತಣ ಕೂಟದಲ್ಲಿ ಭಾಗವಹಿಸುತ್ತಿದ್ದು, ಅಲ್ಲಿ ನಡ್ಡಾ ಸಿಕ್ಕಿದರೆ ಮಾತನಾಡುತ್ತೇನೆ. ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಯಾವುದೇ ಚರ್ಚೆ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ನಿಫಾ ವೈರಸ್ ಸಂಬಂಧಿಸಿದಂತೆ ಕೇರಳದ ಗಡಿ ಭಾಗದಲ್ಲಿ ಬಿಗಿ ಕ್ರಮ ತೆಗೆದುಕೊಳ್ಳಲಾಗಿದೆ. ಈ ವೈರಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವಂತೆ ತಜ್ಞರಿಗೆ ಹೇಳಿದ್ದೇನೆ' ಎಂದರು.
ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಿರುವ ಬಗ್ಗೆ ಜೆಡಿಎಸ್ ನಾಯಕರ ಜೊತೆ ಚರ್ಚೆ ನಡೆಸಿದ್ದೀರಾ ಎಂಬ ಪ್ರಶ್ನೆಗೆ, 'ಈ ಬಗ್ಗೆ ವಿವರವಾಗಿ ಚರ್ಚೆ ಮಾಡಿಲ್ಲ. ಆದರೆ, ಒಟ್ಟಾಗಿ ಹೋಗೋಣ ಎಂದಿದ್ದೇನೆ. ಅವರು (ಜೆಡಿಎಸ್) ಕೂಡಾ ಸ್ಥಳೀಯರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಒಂದಾಗಿ ಕೆಲಸ ಮಾಡಲು ಒಲವು ವ್ಯಕ್ತಪಡಿಸಿದ್ದಾರೆ. ಕಲಬುರ್ಗಿಯಲ್ಲಿ ನಾವು (ಬಿಜೆಪಿ) ಮತ್ತು ಜೆಡಿಎಸ್ ಸೇರಿ ಬಹುಮತ ತೋರಿಸುತ್ತೇವೆ' ಎಂದರು.
'ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಬಗ್ಗೆ ಗೊತ್ತಿದೆ. ಮಳೆ ಸ್ವಲ್ಪ ಕಡಿಮೆ ಆದ ತಕ್ಷಣ ಗುಂಡಿ ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ಹೇಳಿದ್ದೇನೆ. ಸಮರೋಪಾದಿಯಲ್ಲಿ ಕೆಲಸ ನಡೆಯಲಿದೆ' ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಪ್ರಧಾನಿ ಮೋದಿ ಯತ್ನ