ಕೋಲಾರ : ಸೋಮವಾರ ಮಾಧ್ಯಮಗಳೊಂದಿಗೆ ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ರೈತರಿಗೆ ಬರ ಪರಿಹಾರ ನೀಡಲು ಹಣವಿಲ್ಲ ಎನ್ನುವ ಸರ್ಕಾರ ತಮ್ಮ ಪೊಳ್ಳು ಸಾಧನೆಯನ್ನು ಬಣ್ಣಬಣ್ಣದ ಫೋಟೋಗಳಲ್ಲಿ ಜಾಹೀರು ಮಾಡುತ್ತಿದೆ ಎಂದು ಟೀಕಿಸಿದರು. ಪೂರಕ ಬಜೆಟ್ ನಲ್ಲಿ ಕಾಂಗ್ರೆಸ್ ಸರ್ಕಾರ 200 ಕೋಟಿ ರೂ. ಗಳನ್ನು ಜಾಹಿರಾತಿಗೆ ಮೀಸಲಾಗಿಡಲು ಲೇಖನಾನುದಾನ ಪಡೆದಿದೆ. ಇದು ಯಾರಪ್ಪನ ಮನೆ ದುಡ್ಡು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಾನು ಸಿಎಂ ಆಗಿದ್ದಾಗ 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೆ. ಯಾವತ್ತೂ ಅದನ್ನು ಜಾಹಿರಾತಿನ ಮೂಲಕ ಹೇಳಿಕೊಂಡಿರಲಿಲ್ಲ. ಈಗ ಸಿದ್ದರಾಮಯ್ಯ ಸರ್ಕಾರ ರೈತರಿಗೆ ಬರಪರಿಹಾರವಾಗಿ 6 ಸಾವಿರ ರೂ. ನೀಡುವುದಾಗಿ ಘೋಷಿಸಿತ್ತು. ಅದರಲ್ಲಿ ಶೇ 70 ರಷ್ಟು ಕೇಂದ್ರ ಸರ್ಕಾರದ ದುಡ್ಡು. ಆದರೂ ಸಹ ಕಾಂಗ್ರೆಸ್ ಇದನ್ನು ತನ್ನದೇ ಸಾಧನೆ ಎಂದು ಬಿಂಬಿಸಿಕೊಂಡಿತ್ತು. ಇದುವರೆಗೂ ಆ ಹಣ ರೈತರಿಗೆ ತಲುಪಿಲ್ಲ ಎಂದರು.
ಗ್ಯಾರೆಂಟಿ ಯೋಜನೆಗಳ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ನಿಮ್ಮನ್ನು ಕೊಳ್ಳೆ ಹೊಡೆದ ದುಡ್ಡಿನಲ್ಲಿ ನಿಮಗೆ ಪುಗಸಟ್ಟೆ ಗ್ಯಾರೆಂಟಿ ನೀಡಿ ಸದಾ ಜನರನ್ನು ಕೈಚಾಚುವಂತೆ ಮಾಡುವುದೇ ಕಾಂಗ್ರೆಸ್ ಹುನ್ನಾರವಾಗಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ.