ಅತಿಕ್ರಮಣಕಾರರಿಂದ ತನ್ನ ಆಸ್ತಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರೆಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇಂದು 20 ಕೋಟಿ ರೂ ಗಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ತನ್ನ ವಶಕ್ಕೆ ಪಡೆದಿದೆ. ಆಯುಕ್ತರಾದ ಕುಮಾರ್ ನಾಯಕ್ ಆದೇಶದಂತೆ ಜೆ.ಪಿ ನಗರದ 8ನೇ ಹಂತ 2ನೇ ಬ್ಲಾಕ್ ಕೊತ್ತನೂರ್ ವ್ಯಾಪ್ತಿಯ ಸರ್ವೇ ನಂಬರ್ 21/3 ರ ಒಂದು ಎಕ್ಕರೆ ಎಂಟು ಗುಂಟೆ ಜಾಗವನ್ನು ಇಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಕ್ಕೆ ತೆಗೆದುಕೊಂಡಿದೆ. ವಶಪಡಿಸಿಕೊಂಡ ಜಾಗದಲ್ಲಿ ಅತಿಕ್ರಮವಾಗಿ ನಿರ್ಮಾಣ ಮಾಡಿದ್ದ 4 ಶೆಡ್ಗಳನ್ನು ಹಾಗೂ ನಿರ್ಮಾಣ ಹಂತದಲ್ಲಿದ್ದ ಒಂದು ಕಟ್ಟಡವನ್ನು ಬಿಡಿಎ ಜಾಗೃತ ದಳದ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನೆಲಸಮಗೊಳಿಸಿ ವಶಕ್ಕೆ ಪಡೆಯಲಾಯಿತು.ಈ ಸಂದರ್ಭದಲ್ಲಿ ಬಿಡಿಎ ಜಾಗೃತ ದಳದ ಪೊಲೀಸ್ ವರಿಷ್ಠಾಧಿಕಾರಿ ನಂಜುಂಡೇಗೌಡ, ಇನ್ಸೆಪೆಕ್ಟರ್ ಶ್ರೀನೀವಾಸ, ಅಭಿಯಂತರ ಅಧಿಕಾರಿ ಮಲ್ಲಿಕಾರ್ಜುನ ಸ್ವಾಮಿ, ಇಂಜಿನಿಯರ್ಗಳಾದ ಸುರೇಶ್ ಮತ್ತು ಅಶೋಕ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.