Publish Date: Sat, 28 May 2022 (19:45 IST)
Updated Date: Sat, 28 May 2022 (19:49 IST)
ಇಬ್ಬರು ಗರ್ಭಿಣಿಯರು, 2 ಮಕ್ಕಳು ಸೇರಿದಂತೆ 5 ಮಂದಿಯ ಶವ ಬಾವಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯ ಡುಡು ಗ್ರಾಮದಲ್ಲಿ ನಡೆದಿದೆ.
2 ಮಕ್ಕಳು ಸೇರಿದಂತೆ ಮೂವರು ಮಹಿಳೆಯರ ಶವಪತ್ತೆಯಾಗಿದ್ದು, ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ವರದಕ್ಷಿಣೆ ಭೂತಕ್ಕೆ ಇವರು ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಸೋದರಿಯರಾದ ಕಾಲು ದೇವಿ, ಮಮತಾ ಮತ್ತು ಕಮಲೇಶ್ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿರುವುದು ಎಂದು ಗುರುತು ಪತ್ತೆ ಹಚ್ಚಲಾಗಿದೆ. ಎರಡು ಮಕ್ಕಳಲ್ಲಿ ಒಂದು ಮಗುವಿಗೆ 4 ವರ್ಷ ಆಗಿದ್ದರೆ ಮತ್ತೊಂದು ಮಗು 27 ದಿನ ಹಸುಗೂಸಾಗಿದ್ದು, ಕಾಲು ದೇವಿಯದ್ದಾಗಿದೆ.
ಮಮತಾ ಮತ್ತು ಕಮಲೇಶ್ ಇಬ್ಬರೂ ತುಂಬು ಗರ್ಭಿಣಿಯರಾಗಿದ್ದರು. ಮೃತರ ಶವ ಮನೆಯಿಂದ 2 ಕಿ.ಮೀ. ದೂರದ ಬಾವಿಯಲ್ಲಿ ಪತ್ತೆಯಾಗಿದ್ದು, ಅವರ ಗಂಡಂದಿರು ವರದಕ್ಷಿಣೆಗಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.