ಬೆಂಗಳೂರು: ಒಬ್ಬ ಸಾದಾ ಸೀದಾ ಹುಡುಗ. ಅಪ್ಪ- ಅಮ್ಮ ತಂಗಿ ಎಂದು ತನ್ನದೇ ಲೋಕದಲ್ಲಿ ಆಂಗ್ರಿ ಯಂಗ್ ಮ್ಯಾನ್ ಆಗಿದ್ದವನ ಜೀವನದಲ್ಲಿ ಇದ್ದಕ್ಕಿದ್ದಂತೆ ಹುಡುಗಿಯೊಬ್ಬಳು ಬರುತ್ತಾಳೆ. ಮೊದಲು ಅವರಿಬ್ಬರಿಗೆ ತಪ್ಪು ಕಲ್ಪನೆಯಿರುತ್ತದೆ.
ಅವನು ರೇಪಿಸ್ಟ್ ಅಂದುಕೊಂಡಿರುತ್ತಾಳೆ ಅವಳು. ಅವಳು ಕಳ್ಳಿ ಅಂದುಕೊಂಡಿರುತ್ತಾನೆ ಅವನು. ಅದು ಹೇಗೋ ಕಲ್ಪನೆಗಳ ತೆರೆ ಸರಿದ ಮೇಲೆ ಅವನು ಅವಳ ಹಿಂದೇ ಸುತ್ತುತ್ತಾನೆ. ಆದರೆ ಎಲ್ಲಾ ಸಿನಿಮಾದಲ್ಲಿರುವಂತೆ ಅವಳ ಮದುವೆ ಇನ್ನೊಬ್ಬರ ಜತೆ ಫಿಕ್ಸ್ ಆಗಿರುತ್ತದೆ. ಮುಂದೇನಾಗುತ್ತದೆ ಎಂದು ಚಿತ್ರ ನೋಡಿಯೇ ತಿಳಿಯಬೇಕು.
ಇದು ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ಸಾರ. ಯಶ್ ನಂತಹ ಆಂಗ್ರಿ ಯಂಗ್ ಮ್ಯಾನ್ ಗೆ ತಕ್ಕ ಪಾತ್ರ. ಅವರ ಬಾಡಿ, ಕಣ್ಣಿನಲ್ಲಿರುವ ಕಿಚ್ಚಿಗೆ ತಕ್ಕ ಫೈಟ್, ಡೈಲಾಗು ಎಲ್ಲಾ ಇದೆ. ಆದರೂ ಏನೋ ಇಲ್ಲ ಎಂದು ನಿಮಗೆ ಅನಿಸಿದರೆ ಅದು ಕತೆ.
ಹೌದು. ಚಿತ್ರದ ತುಂಬಾ ಶಿಳ್ಳೆ ಗಿಟ್ಟಿಸುವಂತಹ ಡೈಲಾಗ್ ಗಳಿವೆ. ಮೈ ಝುಂ ಎನಿಸುವ ಸಾಹಸ ದೃಶ್ಯಗಳಿವೆ. ಒಟ್ಟಾರೆ ಪಕ್ಕಾ ಮಾಸ್ ಸಿನಿಮಾ. ಆದರೂ ಯಶ್ ನ ಹಿಂದಿನ ಸಿನಿಮಾಗಳನ್ನು ಮನಸ್ಸಲ್ಲಿಟ್ಟುಕೊಂಡು ಹೋದರೆ ಪ್ರೇಕ್ಷಕನಿಗೆ ಕೊಂಚ ನಿರಾಶೆ ಆಗಬಹುದು. ಬಹುಶಃ ಅವರು ಒಂದೇ ಥರದ ಸಿನಿಮಾ ಮಾಡ್ತಿದ್ದಾರೇನೋ ಅನಿಸಬಹುದು.
ಆದರೂ ರಿಯಲ್ ಲೈಫ್ ಜೋಡಿ ರಾಧಿಕಾ-ಯಶ್ ತೆರೆ ಮೇಲೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಡ್ಯುಯೆಟ್ ಹಾಡುಗಳು ಕಿವಿಗೆ ತಂಪು ನೀಡುತ್ತದೆ. ಕತೆಯಲ್ಲಿ ಸ್ಪೆಷಾಲಿಟಿ ಹುಡುಕಲು ಹೊರಟರೆ ಪ್ರೇಕ್ಷಕನಿಗೆ ನಿರಾಸೆ ಆಗಬಹುದು. ಆದರೆ ಮಾಸ್ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕನಿಗೆ ಬೇಕಾದ ಎಲ್ಲಾ ಮನರಂಜನೆಯೂ ಇದೆ.
ಡೈಲಾಗ್ ಗಳು ಸ್ವಲ್ಪ ಅತಿ ಎನಿಸಿದರೂ ನೀವು ಸಹಿಸಿಕೊಳ್ಳಬೇಕು. ಕೆಲವು ಕಡೆ ಇದ್ಯಾವುದೋ ತಮಿಳು, ತೆಲುಗು ಸಿನಿಮಾ ನೋಡಿದಂತಿದೆ ಎಂದು ಅನಿಸಿದರೂ ಕ್ಷಮಿಸಬೇಕು. ಇನ್ನು ಅಭಿನಯದ ವಿಷಯದಲ್ಲಿ ರಾಧಿಕಾ ಪಂಡಿತ್ ಯಾವತ್ತಿನ ಹಾಗೆ ಮನ ಸೆಳೆಯುತ್ತಾರೆ. ಯಶ್ ಮ್ಯಾನರಿಸಂ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದೇವರಾಜ್, ಸೀತಾ, ಅನಂತನಾಗ್ ತಮಗೆ ಕೊಟ್ಟ ಪಾತ್ರವನ್ನು ಚೊಕ್ಕವಾಗಿ ಮುಗಿಸಿದ್ದಾರೆ.
ವಿ. ಹರಿಕೃಷ್ಣ ಸಂಗೀತ ಎಂದಿನಷ್ಟು ಇಲ್ಲದಿದ್ದರೂ ಕೇಳುವಂತಿದೆ. ಚಿತ್ರದಲ್ಲಿ ಸುಂದರ ದೃಶ್ಯಗಳು ಬಂದರೆ ಛಾಯಾಗ್ರಾಹಕ ಆಂಡ್ರ್ಯೂಗೆ ಒಂದು ಥ್ಯಾಂಕ್ಸ್ ಹೇಳಲೇಬೇಕು. ಒಟ್ಟಾರೆ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ