ಬೆಂಗಳೂರು: ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಹೊಸಬರು ಎಂಟ್ರಿ ಕೊಡುತ್ತಿದ್ದಾರೆ. ಹೊಸಬರು ಮಾಡುವ ಕೆಲವು ಚಿತ್ರಗಳು ಎಂದರೆ ಅಸಡ್ಡೆ ಮಾಡುವಂತಿಲ್ಲ.
ಯಾಕೆಂದರೆ ಹೊಸಬರ ಸಿನಿಮಾದಲ್ಲಿ ಹೊಸತನವಿರುತ್ತದೆ. ಹೊಸ ಕತೆಗಳಿರುತ್ತವೆ. ವಿಶೇಷವಾಗಿ ಇಲ್ಲಿ ಹೀರೋಗಳ ಆರ್ಭಟ, ವಿಲನ್ ಗಳ ಅಬ್ಬರವಿರುವುದಿಲ್ಲ. ಹೀರೋಗಾಗಿಯೇ ಮಾಡುವ ಕತೆಗಳಲ್ಲ. ಹಾಗಾಗಿ ಇಲ್ಲಿ ಕತೆಗಳೇ ಹೀರೋಗಳಾಗಿರುತ್ತಾರೆ. ಹಾಗಾಗಿ ಹೊಸಬರ ಸಿನಿಮಾಗಳು ಇಷ್ಟವಾಗುತ್ತವೆ.
ಎರಡು ವಾರಗಳ ಹಿಂದೆ ಬಿಡುಗಡೆಯಾದ ರಾಮಾ ರಾಮಾ ರೇ ಚಿತ್ರ ಇಷ್ಟವಾಗಿದ್ದೂ ಇದೇ ಕಾರಣಕ್ಕೆ. ಇಲ್ಲಿ ಪಾತ್ರವರ್ಗದವರ ಸಂಖ್ಯೆ ಕಡಿಮೆ. ಇನ್ನೂ ಹೆಸರು ಮಾಡಿರದ ಆದರೆ ಅಭಿನಯದಲ್ಲಿ ಪಳಗಿದವರೇ ಅಭಿನಯಿಸಿದ ಕಾರಣಕ್ಕೆ ಅದು ಇಷ್ಟವಾಗಿತ್ತ.
ನಿನ್ನೆ ಬಿಡುಗಡೆಯಾದ ಕಹಿ ಎನ್ನುವ ಹೊಸಬರ ಸಿನಿಮಾವೂ ಮುಖ ಕಹಿ ಮಾಡಿಕೊಳ್ಳುವಷ್ಟು ಕೆಟ್ಟ ಸಿನಿಮಾವಲ್ಲ. ಹೊಸಬರ ಪ್ರಯತ್ನಕ್ಕೊಂದು ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು. ಇದು ಕೇವಲ ನಾಲ್ಕು ಕಥಾಪಾತ್ರಗಳ ನಡುವೆ ಸುತ್ತುವ ಕತೆ.
ಗೌಜಿ ಗದ್ದಲಗಳಿಲ್ಲ, ಮರು ಸುತ್ತುವ ದೃಶ್ಯಗಳಿಲ್ಲ. ಆದರೂ ನಾಲ್ಕು ಜನರೊಳಗೇ ಸುತ್ತುವ ಕತೆ. ಒಬ್ಬ ಡ್ಯಾನ್ಸರ್, ಒಬ್ಬ ಡ್ರಗ್ಸ್ ಮಾರುವವ, ಇನ್ನೊಬ್ಬ ಸೈಕೋ ಮತ್ತೊಬ್ಬಳು ಲೇಖಕಿಯ ಸುತ್ತ ಹಣೆದಿರುವ ಕತೆ. ಸಿನಿಮಾ ಎಲ್ಲೂ ಬಿಗಿ ಕಳೆದುಕೊಳ್ಳದಂತೆ ನೋಡಿಕೊಂಡಿದ್ದಾರೆ ನಿರ್ದೇಶಕ ಅರವಿಂದ ಶಾಸ್ತ್ರಿ.
ಅಭಿನಯದಲ್ಲೂ ಸೂರಜ್ ಗೌಡ, ಕೃಷಿ ತಾಪಂಡ, ಹರಿ ಶರ್ಮಾ ಸೈ ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಆಸೆ ಇದೆ, ದುರಾಸೆ ಇದೆ, ಹಠವಿದೆ, ಕೆಟ್ಟ ಚಟಗಳ ನರಕ ದರ್ಶನವಿದೆ. ಒಟ್ಟಾರೆ ಒಂದು ವಾಸ್ತವಿಕ ಸಿನಿಮಾ ನೋಡಲು ಬಯಸುವವರು ಒಮ್ಮೆ ನೋಡಬಹುದಾದ ಸಿನಿಮಾವಿದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ