Select Your Language

Notifications

webdunia
webdunia
webdunia
webdunia

ಕನ್ನಡ ಚಿತ್ರರಂಗದ ಭಾಷಾ ಪ್ರೇಮ ಬರೀ ಬೂಟಾಟಿಕೆ?

ಕನ್ನಡ ಚಿತ್ರರಂಗದ ಭಾಷಾ ಪ್ರೇಮ ಬರೀ ಬೂಟಾಟಿಕೆ?
PR
ಮಾತು ಮಾತಿಗೆ ಕನ್ನಡ, ಕನ್ನಡ ಅನ್ನೋ ಅಣಿಮುತ್ತುಗಳನ್ನು ಉಚಿತವಾಗಿ ಉದುರಿಸುವ ಕನ್ನಡ ಚಿತ್ರರಂಗದ ದಿಗ್ಗಜರ ಬಂಡವಾಳ ಒಂದೊಂದಾಗಿಯೇ ಬಯಲಾಗುತ್ತಿದೆ. ಅವರು ಕನ್ನಡ, ಕನ್ನಡ ಅಂತ ಬೊಬ್ಬಿರಿಯುತ್ತಿರುವುದು ಹಣಕ್ಕಾಗಿಯೇ ಹೊರತು, ಇನ್ನೇನಕ್ಕೂ ಅಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈ ಬಾರಿ ಹಾಗೆ ರುಜುವಾತು ಮಾಡಲು ಹೊರಟಿರುವುದು ಬೇರೆ ಯಾರೂ ಅಲ್ಲ, ಸ್ವತಃ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ!

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) -- ತನ್ನ ಚುನಾವಣೆ, ಅಧ್ಯಕ್ಷರ ಆಯ್ಕೆ, ಅವರ ನಡವಳಿಕೆ, ಕನ್ನಡ ವಿರೋಧಿ ನೀತಿ ಸೇರಿದಂತೆ ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ಸಂಸ್ಥೆ. ಅದು ತನ್ನ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಕೈಲಾಗದವರ ಮೇಲೆ ಮಾತ್ರ. ಈಗ ಅದಕ್ಕೆ ಸ್ಪಷ್ಟ ನಿದರ್ಶನಗಳು ಸಿಗುತ್ತಿವೆ. ಈ ಬಾರಿ ದೀಪಾವಳಿಗೆ ಸಾಲು ಸಾಲು ಪರಭಾಷಾ ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ, ಕೆಎಫ್‌ಸಿಸಿ ಮತ್ತು ಅದರ ಸದಸ್ಯರು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯಲು ಸಿದ್ಧರಾಗಿದ್ದಾರೆ.

ಕೆಎಫ್‌ಸಿಸಿ ನಿಯಮಾವಳಿಗಳ ಪ್ರಕಾರ, ಕನ್ನಡ ಹೊರತುಪಡಿಸಿದ ಯಾವುದೇ ಭಾಷೆಯ ಚಿತ್ರ ಕರ್ನಾಟಕದಲ್ಲಿ 25ಕ್ಕಿಂತ ಹೆಚ್ಚು ಫ್ರಿಂಟ್‌ಗಳನ್ನು ಪ್ರದರ್ಶಿಸಬಾರದು. ಅಲ್ಲದೆ, ಪರಭಾಷಾ ಚಿತ್ರ ತನಗೆ ಸಂಬಂಧಪಟ್ಟ ರಾಜ್ಯದಲ್ಲಿ ಬಿಡುಗಡೆಯಾದ ಆರು ವಾರಗಳ ನಂತರವಷ್ಟೇ ಕರ್ನಾಟಕದಲ್ಲಿ ಬಿಡುಗಡೆಯಾಗಬೇಕು.

ಆದರೆ ಈ ನಿಯಮವನ್ನು ಮಂಡಳಿ ಗಾಳಿಗೆ ತೂರುವುದೇ ಹೆಚ್ಚು. ಪರಭಾಷಾ ಚಿತ್ರಗಳ ನಿರ್ಮಾಪಕರನ್ನು, ವಿತರಕರನ್ನು ನಿಯಂತ್ರಿಸುವ ಗೋಜಿಗೆ ಹೋಗುವುದೇ ಇಲ್ಲ. ಈ ಬಾರಿಯೂ ಅದೇ ನಡೆದಿದೆ. ಅದರ ಹಿಂದಿರುವ ವ್ಯಕ್ತಿಗಳು ಮತ್ತು ಕಾರಣವಂತೂ ರೇಜಿಗೆ ಹುಟ್ಟಿಸುವಂತಿದೆ.

ಈ ದೀಪಾವಳಿಗೆ ಬಹುನಿರೀಕ್ಷೆಯ ವಿಜಯ್ ನಾಯಕನಾಗಿರುವ 'ವೇಲಾಯುಧಂ' ಮತ್ತು ಸೂರ್ಯ ನಾಯಕತ್ವದ 'ಏಳಾಂ ಅರಿವು' (ಸೆವೆಂತ್ ಸೆನ್ಸ್) ಎಂಬ ಎರಡು ತಮಿಳು ಹಾಗೂ ಶಾರೂಖ್ ಖಾನ್‌ರ 'ರಾ. ವನ್' ಬಿಡುಗಡೆಯಾಗುತ್ತಿವೆ. ಈ ಮೂರು ಚಿತ್ರಗಳು ಕರ್ನಾಟಕದ 200ಕ್ಕೂ ಹೆಚ್ಚು ಪರದೆಗಳನ್ನು ಆಕ್ರಮಿಸಿಕೊಳ್ಳಲಿವೆ. ಪರಿಣಾಮ, ಹಿಟ್ ಹಾದಿಯಲ್ಲಿರುವ ಪರಮಾತ್ಮ, ಸಾರಥಿ, ಕಳ್ಳ ಮಳ್ಳ ಸುಳ್ಳಗಳಂತಹ ಕನ್ನಡ ಚಿತ್ರಗಳು ಮೂಲೆಗುಂಪಾಗಲಿವೆ.

ಹೀಗೆ ಕನ್ನಡದ ನೆಲದಲ್ಲಿ ಕನ್ನಡ ಚಿತ್ರಗಳು ಮೂಲೆಗುಂಪಾಗಲು ಕಾರಣ ಯಾರು ಗೊತ್ತೇ? ಸ್ವತಃ ಕನ್ನಡಿಗರು. ಮೊದಲನೆಯದಾಗಿ ಕರ್ನಾಟಕ ಚಲನಚಿತ್ರ ಮಂಡಳಿ ಮಗುಮ್ಮಾಗಿ ಕುಳಿತಿರುವುದು. ಎರಡನೆಯದಾಗಿ ನಿರ್ಮಾಪಕ ಕೆ. ಮಂಜು.

ಹೌದು, ಸದಾ ಕನ್ನಡಕ್ಕಾಗಿ ಕೈ ಎತ್ತುವ ನಿರ್ಮಾಪಕ ಮಂಜು ತಮಿಳು ಚಿತ್ರವೊಂದರ ವಿತರಕ. ವಿಜಯ್ ನಾಯಕರಾಗಿರುವ 'ವೇಲಾಯುಧಂ' ವಿತರಣೆಯ ಕರ್ನಾಟಕದ ಹಕ್ಕುಗಳನ್ನು ಹತ್ತಾರು ಕೋಟಿ ರೂಪಾಯಿಗಳಿಗೆ ಪಡೆದುಕೊಂಡು, ಭಾರೀ ಲಾಭದ ನಿರೀಕ್ಷೆಯಲ್ಲಿದ್ದಾರೆ. ಕೆಎಫ್‌ಸಿಸಿ ನಿಯಮಾವಳಿಗಳು ಸದ್ಯಕ್ಕೆ ಅವರಿಗೆ ಅನ್ವಯವಾಗುತ್ತಿಲ್ಲ.

ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಂತ ಹೇಳುವುದು ಇದಕ್ಕೆ ತಾನೇ? ಇಂತಹಾ ಪ್ರಸಂಗ ಇದೇ ಮೊದಲೇನಲ್ಲ. ಈ ಹಿಂದೆ ರಜನಿಕಾಂತ್ ನಾಯಕರಾಗಿದ್ದ ಚಿತ್ರಗಳು ಬಿಡುಗಡೆಯಾದಾಗಲೂ, ಕನ್ನಡದ ನಿರ್ಮಾಪಕರು ವಿತರಣೆಯ ಹಕ್ಕುಗಳನ್ನು ಪಡೆದು ಬೇಕಾಬಿಟ್ಟಿ ರಿಲೀಸ್ ಮಾಡಿ ಕನ್ನಡಕ್ಕೆ ದ್ರೋಹ ಬಗೆದಿದ್ದರು. ಸ್ವತಃ ಕೆಎಫ್‌ಸಿಸಿಯೇ ಸುಮ್ಮನಿರುವಾಗ ಬೇರೆ ಇನ್ಯಾರಾದರೂ ಏನು ಮಾಡಲು ಸಾಧ್ಯ?


Share this Story:

Follow Webdunia kannada

ಮುಂದಿನ ಸುದ್ದಿ

ನಟ ಒರಟ ಪ್ರಶಾಂತ್ ಠಾಣೆಯಿಂದ ಗ್ರೇಟ್ ಎಸ್ಕೇಪ್!