Publish Date: Wed, 22 Aug 2018 (15:17 IST)
Updated Date: Wed, 22 Aug 2018 (15:20 IST)
ಬೆಂಗಳೂರು: ನಟ ಯಶ್ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರಂತೆ. ಯಶ್ ಹೀಗೆ ಸಿಟ್ಟಾಗುವುದಕ್ಕೆ ಕಾರಣ ಕೊಡಗು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ನೆಪದಲ್ಲಿ ಕೆಲವರು ಯಶೋಮಾರ್ಗವನ್ನು ದುರುಪಯೋಗಪಡಿಸಿಕೊಂಡಿರುವುದಂತೆ.
ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವ ನೆಪದಲ್ಲಿ ಕೆಲವರು ಪರಿಸ್ಥಿತಿ ದುರುಪಯೋಗಪಡಿಸಿಕೊಳ್ತಿದ್ದಾರೆ. ಕೆಲ ಕಿಡಿಗೇಡಿಗಳು ನಟ ಯಶ್ ನೇತೃತ್ವದ ಯಶೋಮಾರ್ಗ ಫೌಂಡೇಶನ್ ಹೆಸರಲ್ಲಿ ದೇಣಿಗೆ ಸಂಗ್ರಹ ಮಾಡ್ತಿದ್ದಾರೆ. ಈ ವಿಚಾರ ತಿಳಿದ ರಾಕಿಂಗ್ ಸ್ಟಾರ್ ಗರಂ ಆಗಿದ್ದಾರೆ.
‘ಯಶೋಮಾರ್ಗ’ ಸಂಸ್ಥೆಯ ಮೂಲಕ ನನ್ನ ಸ್ವಂತ ಸಂಪಾದನೆಯ ಹಣದಲ್ಲಿ ನನ್ನ ಆತ್ಮ ತೃಪ್ತಿಗಾಗಿ ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇನೆ. ಇದಕ್ಕಾಗಿ ಯಾವುದೇ ದೇಣಿಗೆ/ವಂತಿಗೆಯನ್ನು ಜನರಿಂದ ಸ್ವೀಕರಿಸುತ್ತಿಲ್ಲ.
ಆದರೆ, ಇತ್ತೀಚೆಗೆ ಭಾರಿ ಮಳೆಯಿಂದಾಗಿ ನಿರಾಶ್ರಿತರಾದ ಕೊಡಗಿನ ಜನರಿಗೆ ಪರಿಹಾರ ನೀಡುವ ನೆಪದಲ್ಲಿ ಯಶೋಮಾರ್ಗದ ಹೆಸರಲ್ಲಿ ದೇಣಿಗೆ ಸಂಗ್ರಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ.
ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ ಇದಕ್ಕಾಗಿ ಯಶೋಮಾರ್ಗದ ಹೆಸರನ್ನು ಬಳಸಬಾರದೆಂದು ವಿನಂತಿಸುತ್ತೇನೆ. ಸಾರ್ವಜನಿಕರ ನೆರವು ಯಶೋಮಾರ್ಗಕ್ಕೆ ಅವಶ್ಯವೆನಿಸುವ ಸಂದರ್ಭದಲ್ಲಿ ನಾನೇ ಖುದ್ದು ನಿಮ್ಮ ಮುಂದೆ ಬರುತ್ತೇನೆ. ಸಧ್ಯಕ್ಕೆ ಯಶೋಮಾರ್ಗದ ಹೆಸರಿನಲ್ಲಿ ದೇಣಿಗೆ ಕೇಳಲು ಬಂದವರಿಗೆ ದೇಣಿಗೆ ನೀಡಬೇಡಿ ಎಂದು ನಾನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ ಎಂದು ಯಶ್ ಹೇಳಿದ್ದಾರೆ.