ಮುಂಬೈ: ನಟಿ ರಶ್ಮಿಕಾ ಮಂದಣ್ಣರ ಡೀಪ್ ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೇ ಇದೀಗ ಚಿತ್ರರಂಗ, ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ರಶ್ಮಿಕಾರ ಡೀಪ್ ಫೇಕ್ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇದರಲ್ಲಿ ರಶ್ಮಿಕಾರನ್ನು ಅಶ್ಲೀಲವಾಗಿ ತೋರಿಸಲಾಗಿದೆ. ಈ ವಿಡಿಯೋ ನೋಡಿ ಸ್ವತಃ ರಶ್ಮಿಕಾ ಶಾಕ್ ಗೊಳಗಾಗಿರುವುದಾಗಿ ಹೇಳಿದ್ದಾರೆ.
ಈ ವಿಡಿಯೋ ಮೊದಲು ಬ್ರಿಟಿಷ್ ಇಂಡಿಯನ್ ಝರಾ ಪಟೇಲ್ ಎಂಬವರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಕ್ಟೋಬರ್ 9 ರಂದು ಮೊದಲ ಬಾರಿಗೆ ಪ್ರಸಾರವಾಗಿತ್ತು. ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸೇರಿದಂತೆ ಚಿತ್ರರಂಗದ ಕಲಾವಿದರು ರಶ್ಮಿಕಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ರೀತಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ಓರ್ವ ವ್ಯಕ್ತಿಯ ಘನತೆಗೆ ಕುತ್ತು ತರುವಂತಹ ವಿಡಿಯೋ ಹರಿಯಬಿಡುವವರ ವಿರುದ್ಧ ಕಠಿಣ ಕಾನೂನು ಕ್ರಮ ರೂಪಿಸಬೇಕಿದೆ ಎಂದು ಹಲವರು ಆಗ್ರಹಿಸಿದ್ದಾರೆ. ಅಮಿತಾಭ್ ಬಚ್ಚನ್ ಕೂಡಾ ರಶ್ಮಿಕಾಗೆ ಕಾನೂನು ಕ್ರಮ ಕೈಗೊಳ್ಳಲು ಸಲಹೆ ನೀಡಿದ್ದಾರೆ.
ತನಗೆ ಬೆಂಬಲವಾಗಿ ನಿಂತ ಅಮಿತಾಭ್ ಗೆ ರಶ್ಮಿಕಾ ಧನ್ಯವಾದ ಸಲ್ಲಿಸಿದ್ದಾರೆ. ಇದೀಗ ತನ್ನ ಚಾರಿತ್ರ್ಯವಧೆ ಮಾಡಿದ ಫೇಕ್ ವಿಡಿಯೋ ನಿರ್ಮಾಪಕರ ವಿರುದ್ಧ ರಶ್ಮಿಕಾ ಕಾನೂನು ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.