ಬೆಂಗಳೂರು: ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂತೆರೊ ಸತಿ-ಪತಿಗಳಾಗುತ್ತಿರುವುದು ಇದೀಗ ಪಕ್ಕಾ ಆಗಿದೆ. ಇಂದು ಅಧಿಕೃತವಾಗಿ ಈ ಜೋಡಿ ತಮ್ಮ ಮದುವೆ ಸುದ್ದಿಯನ್ನು ಪ್ರಕಟಿಸಲಿದ್ದಾರೆ. ಇದೀಗ ಸೋನಲ್ ಹಿನ್ನಲೆ ಬಗ್ಗೆ ತಿಳಿದುಕೊಳ್ಳೋಣ.
ಸೋನಲ್ ಮಾಂತೆರೊ ಮಾಡೆಲ್ ಆಗಿ ಗುರುತಿಸಿಕೊಂಡವರು. ಬಳಿಕ ಚಿತ್ರರಂಗಕ್ಕೆ ಕಾಲಿಟ್ಟರು. ಮಂಗಳೂರು ಮೂಲದವರಾದ ಸೋನಲ್ ಗೆ ಈಗ 29 ವರ್ಷ ವಯಸ್ಸು. ಅವರ ವಿದ್ಯಾಭ್ಯಾಸವೆಲ್ಲಾ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ನಡೆದಿತ್ತು. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಫೀಲ್ಡ್ ಗೆ ಕಾಲಿಟ್ಟರು.
2013 ರಲ್ಲಿ ಮಿಸ್ ಬ್ಯೂಟಿಫುಲ್ ಸ್ಮೈಲ್, 2015 ರಲ್ಲಿ ಮಿಸ್ ಕೊಂಕಣ್ ಟೈಟಲ್ ಮುಡಿಗೇರಿಸಿಕೊಂಡರು. ಸೋನಲ್ ಬಳಿಕ ಕೊಂಕಣಿ ಆಲ್ಬಂಗಳಲ್ಲೂ ಕಾಣಿಸಿಕೊಂಡರು. 2015 ರಲ್ಲಿ ತುಳುವಿನಲ್ಲಿ ಎಕ್ಕ ಸಕ್ಕ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕನ್ನಡದಲ್ಲಿ ಅಭಿಸಾರಿಕೆ ಎನ್ನುವ ಸಿನಿಮಾ ಮೂಲಕ ಎಂಟ್ರಿ ಕೊಟ್ಟರೂ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ.
ಬಳಿಕ ದರ್ಶನ್ ನಾಯಕರಾಗಿ, ತರುಣ್ ಸುಧೀರ್ ನಿರ್ದೇಶಿಸಿದ್ದ ರಾಬರ್ಟ್ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾ ಬಳಿಕ ತರುಣ್ ಮತ್ತು ಸೋನಲ್ ನಡುವೆ ಪ್ರೀತಿ ಹುಟ್ಟಿತು ಎನ್ನಲಾಗಿದೆ. ಇಂದು 11.08 ಕ್ಕೆ ಈ ಜೋಡಿ ಮುಂದಿನ ತಿಂಗಳು ನಡೆಯಲಿರುವ ತಮ್ಮ ಮದುವೆ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿದ್ದಾರೆ.