ಬೆಂಗಳೂರು: ಸ್ಯಾಂಡಲ್ ವುಡ್ ನ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮಜಯಂತಿ ಇಂದು. ವಿಷ್ಣುವರ್ಧನ್ ಸಮಾಜಕ್ಕೆ ನೀಡಿದ ಕೊಡುಗೆಯಲ್ಲಿ ಸ್ನೇಹ ಲೋಕ ಕ್ಲಬ್ ಕೂಡಾ ಒಂದು.
ವಿಷ್ಣುವರ್ಧನ್ ಬದುಕಿದ್ದಿದ್ದರೆ ಅವರಿಗೆ ಇಂದು 74 ವರ್ಷವಾಗಿರುತ್ತಿತ್ತು. ತಮ್ಮ 59 ನೇ ವಯಸ್ಸಿನಲ್ಲೇ ಇಹಲೋಕ ಪಯಣ ಮುಗಿಸಿದ್ದ ವಿಷ್ಣುವರ್ಧನ್ ತಮ್ಮ ಸಾವಿಗೆ ಮೊದಲು ಸ್ನೇಹಲೋಕ ಎನ್ನುವ ಕ್ಲಬ್ ಒಂದನ್ನು ಆರಂಭಿಸಿದ್ದರು. ಇದರಲ್ಲಿ ಅವರ ಗೆಳೆಯರು ಪಾಲುದಾರರಾಗಿದ್ದರು.
ಈ ಕ್ಲಬ್ ಮುಖಾಂತರ ಕ್ರಿಕೆಟ್ ಪಂದ್ಯ ಆಯೋಜಿಸುವುದು, ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಸಮಾಜ ಸೇವೆ ನೀಡುವುದು ಇತ್ಯಾದಿ ಗುರಿ ವಿಷ್ಣುವರ್ಧನ್ ಅವರದ್ದಾಗಿತ್ತು. ವಿಷ್ಣುವರ್ಧನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಸಿನಿ ಸ್ನೇಹಿತರು ಈಗಲೂ ಈ ಕ್ಲಬ್ ನ ಭಾಗವಾಗಿದ್ದಾರೆ.
ಈಗಲೂ ಈ ಕ್ಲಬ್ ಸಕ್ರಿಯವಾಗಿದ್ದು, ಭಾರತಿ ವಿಷ್ಣುವರ್ಧನ್ ಮತ್ತು ವಿಷ್ಣುವರ್ಧನ್ ಸ್ನೇಹಿತರು ಇದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಕ್ಲಬ್ ಆರಂಭವಾಗಿ ಈಗಾಗಲೇ 15 ವರ್ಷಗಳೇ ಕಳೆದಿವೆ. ತಮ್ಮ ಜೀವನದುದ್ದಕ್ಕೂ ವಿಷ್ಣುವರ್ಧನ್ ಎಡಗೈಗೆ ಗೊತ್ತಿಲ್ಲದೇ ಬಲಗೈಯಲ್ಲಿ ದಾನ ಮಾಡಿದ ಉದಾರಿ. ಬಹುಶಃ ಅವರು ಬದುಕಿದ್ದಿದ್ದರೆ ಈ ಕ್ಲಬ್ ಮುಖಾಂತರ ಮತ್ತಷ್ಟು ಸಮಾಜಮುಖೀ ಕೆಲಸಗಳನ್ನು ಮಾಡುವ ಉದ್ದೇಶ ಅವರಿಗಿತ್ತೋ ಏನೋ. ಆದರೆ ಅವರ ಹೆಸರಿನಲ್ಲಿ ಈಗಲೂ ಈ ಕ್ಲಬ್ ಸಕ್ರಿಯವಾಗಿರುವುದು ವಿಶೇಷ.