ಚೆನ್ನೈ: ತಮಿಳು ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯ ಸೇರ್ಪಡೆ ಇದೀಗ ಅಧಿಕೃತಗೊಂಡಿದ್ದು, ತಮ್ಮ ಹೊಸ ರಾಜಕೀಯ ಪಕ್ಷದ ಹೆಸರನ್ನು ವಿಜಯ್ ಘೋಷಣೆ ಮಾಡಿದ್ದಾರೆ.
ತಮಿಳಗ ವೆಟ್ರಿ ಕಳಗಂ ಎನ್ನುವ ಪಕ್ಷ ವಿಜಯ್ ಸ್ಥಾಪನೆ ಮಾಡಿದ್ದಾರೆ. ಆ ಮೂಲಕ ಸಿನಿಮಾ ರಂಗದಿಂದ ರಾಜಕೀಯಕ್ಕೆ ಬಂದ ತಮಿಳುನಾಡಿನ ಘಟಾನುಘಟಿಗಳ ಸಾಲಿಗೆ ಸೇರಿಕೊಂಡಿದ್ದಾರೆ. ವಿಜಯ್ ಪಕ್ಷ ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಹುಟ್ಟುಹಾಕಲಿ ಎಂಬ ವಿಶ್ವಾಸವಿದೆ.
2026 ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲಿ ವಿಜಯ್ ಪಕ್ಷ ಸ್ಪರ್ಧಿಸಲಿದೆ. ಆದರೆ ಸದ್ಯಕ್ಕೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ‍್ಯತೆಯಿಲ್ಲ ಎನ್ನಲಾಗಿದೆ. ಈಗಷ್ಟೇ ವಿಜಯ್ ಹೊಸ ಪಕ್ಷ ಆರಂಭಿಸಿದ್ದು, ಇದರ ಸಂಘಟನೆಗೆ ಕೊಂಚ ಸಮಯ ಬೇಕಾಗುತ್ತದೆ.
ಕೇರಳ ಮತ್ತು ತಮಿಳುನಾಡಿನಲ್ಲಿ ವಿಜಯ್ ಗೆ ಅಪಾರ ಅಭಿಮಾನಿಗಳಿದ್ದಾರೆ. ಹೀಗಾಗಲೇ ಸಾಮಾಜಿಕ ಕೆಲಸಗಳಿಂದ ಜನರ ಮನಸ್ಸು ಗೆದ್ದಿದ್ದಾರೆ. ಹೀಗಾಗಿ ರಾಜಕೀಯದಲ್ಲೂ ಒಂದು ಕೈ ನೋಡಲು ಮುಂದಾಗಿದ್ದಾರೆ. ಸದ್ಯಕ್ಕೆ ವಿಜಯ್ ಅವರೇ ಪಕ್ಷದ ಅಧ್ಯಕ್ಷರಾಗಿರುತ್ತಾರೆ.
ತಮಿಳುನಾಡಿನಲ್ಲಿ ಸಿನಿಮಾ ರಂಗದಿಂದ ಬಂದ ಬಹುತೇಕರು ರಾಜಕೀಯದಲ್ಲೂ ಮಿಂಚಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ ಜಯಲಲಿತಾ, ಕರುಣಾನಿಧಿ, ವಿಜಯ್ ಕಾಂತ್, ಕಮಲ್ ಹಾಸನ್ ಮುಂತಾದವರು. ಕಮಲ್ ಹಾಸನ್ ಕೆಲವು ವರ್ಷಗಳ ಮೊದಲಷ್ಟೇ ರಾಜಕೀಯಕ್ಕೆ ಕಾಲಿಟ್ಟಿದ್ದರು. ಆದರೆ ಅವರಿಗೆ ಇದುವರೆಗೆ ಅಂತಹ ಯಶಸ್ಸು ಸಿಕ್ಕಿಲ್ಲ. ಇದಕ್ಕೆ ಮೊದಲು ರಜನೀಕಾಂತ್ ರಾಜಕೀಯ ಪಕ್ಷ ಕಟ್ಟಿ ಕೊನೆಗೆ ತಮ್ಮಿಂದ ನಿರ್ವಹಣೆ ಸಾಧ‍್ಯವಿಲ್ಲ ಎಂದು ಕೈಬಿಟ್ಟಿದ್ದರು.