ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಪರಭಾಷಾ ನಟಿ ತಮನ್ನಾ ಭಾಟಿಯಾರನ್ನು ನೇಮಕ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಕನ್ನಡ ನಟಿಯರು ಯಾರೂ ಸಿಗ್ಲಿಲ್ವಾ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮನ್ನಾ ಭಾಟಿಯಾ ಬರೋಬ್ಬರಿ 6.20 ಕೋಟಿ ರೂ. ಶುಲ್ಕ ನೀಡಿ ಎರಡು ವರ್ಷಕ್ಕೆ ರೂಪದರ್ಶಿಯಾಗಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ಗೆ ಕರ್ನಾಟಕ ಹೊರತಾಗಿ ರಾಷ್ಟ್ರಮಟ್ಟದಲ್ಲಿ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಪರಭಾಷಾ ನಟಿಯನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ಸಮರ್ಥನೆ ನೀಡಿದ್ದರು.
ಆದರೆ ತಮನ್ನಾ ಆಯ್ಕೆ ಮಾಡಿರುವುದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಸಾರ್ವಜನಿಕರು, ಕನ್ನಡ ಪರ ಹೋರಾಟಗಾರರು, ವಿಪಕ್ಷ ಬಿಜೆಪಿಯಿಂದ ಆಕ್ರೋಶ ವ್ಯಕ್ತವಾಗಿದೆ. ಕನ್ನಡದಲ್ಲೇ ಸಾಕಷ್ಟು ಹೆಸರು ಮಾಡಿರುವ ನಟಿಯರಿದ್ದಾರೆ. ಅವರನ್ನು ಹೊರತುಪಡಿಸಿ ಪರಭಾಷಾ ನಟಿಯರಿಗೆ ಮಣೆ ಹಾಕಿರುವುದೇಕೆ ಎಂದು ಆಕ್ರೋಶ ವ್ಯಕ್ತವಾಗಿದೆ.
ನಾವು ಕನ್ನಡ ಪರ ಎಂದು ಹೇಳಿಕೊಳ್ಳುವ ಸರ್ಕಾರ ಈಗ ಕನ್ನಡೇತರ ನಟಿಗೆ ಇಷ್ಟೊಂದು ಹಣ ಕೊಟ್ಟು ನೇಮಕ ಮಾಡಿರುವುದು ಯಾಕೆ ಎಂದು ಆಕ್ರೋಶ ವ್ಯಕ್ತವಾಗಿದೆ. ನಮ್ಮ ನಾಡಿನ ಹೆಮ್ಮೆಯ ಸಂಸ್ಥೆಯ ರಾಯಭಾರಿಯಾಗಿ ಕನ್ನಡದ ಗಂಧ ಗಾಳಿಯೇ ಇಲ್ಲದ ನಟಿ ಯಾಕೆ ಎಂದು ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದೆ.