ನವದೆಹಲಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಕೇಳಿದ ಅದೊಂದು ಪ್ರಶ್ನೆಯಿಂದ ದರ್ಶನ್ ಆಂಡ್ ಗ್ಯಾಂಗ್ ಗೆ ನಡುಕ ಶುರುವಾಗೋದು ಗ್ಯಾರಂಟಿ.
ನಿನ್ನೆ ಸುಪ್ರೀಂಕೋರ್ಟ್ ನಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ದರ್ಶನ್ ಸೇರಿದಂತೆ ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲಾಗಿದೆ. ಈ ವೇಳೆ ಸುಪ್ರೀಂಕೋರ್ಟ್ ನ್ಯಾಯಪೀಠ ಹಲವು ಪ್ರಶ್ನೆಗಳನ್ನು ಎತ್ತಿದೆ.
ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ಆಕ್ಷೇಪವೆತ್ತಿದೆ. ನ್ಯಾ. ಜೆ.ಬಿ. ಪರ್ದೀವಾಲಾ ಮತ್ತು ನ್ಯಾ. ಆರ್ ಮಹಾದೇವನ್ ನೇತೃತ್ವದ ಪೀಠ ವಿಚಾರಣೆ ನಡೆಸಿದೆ. ಈ ವೇಳೆ ಹೈಕೋರ್ಟ್ ತನನ ವಿವೇಚನೆಯನ್ನು ಬಳಸಿರುವ ಬಗ್ಗೆ ನಮಗೆ ಮನದಟ್ಟಾಗುತ್ತಿಲ್ಲ ಎಂದಿದ್ದಾರೆ.
ಆರೋಪಿಗಳನ್ನು ಹೇಗೆ ಬಿಡುಗಡೆ ಮಾಡಬೇಕೆಂದು ಹೈಕೋರ್ಟ್ ಹುಡುಕಿದಂತಿದೆ ಎಂದು ಸುಪ್ರೀಂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಈ ಜಾಮೀನು ಆದೇಶದಲ್ಲಿ ಸುಪ್ರೀಂ ಯಾಕೆ ಮಧ್ಯಪ್ರವೇಶಿಸಬಾರದು ಎಂದು ಪ್ರಶ್ನೆ ಎತ್ತಿದ್ದು, ಉತ್ತರಿಸಲು ದರ್ಶನ್ ಪರ ವಕೀಲರಿಗೆ ಸೂಚಿಸಿದೆ. ಅಲ್ಲದೆ ದರ್ಶನ್ ವಿರುದ್ಧ ಹಿಂದಿನ ಪ್ರಕರಣಗಳ ಬಗ್ಗೆಯೂ ವಿವರಣೆ ಕೇಳಿದೆ. ಈ ಪ್ರಶ್ನೆ ದರ್ಶನ್ ಮತ್ತು ಇತರೆ ಆರೋಪಿಗಳ ಆತಂಕಕ್ಕೆ ಕಾರಣವಾಗಲಿದೆ. ಒಂದು ವೇಳೆ ದರ್ಶನ್ ಪರ ವಕೀಲರು ನೀಡುವ ಉತ್ತರ ಸಮಂಜಸವಾಗಿಲ್ಲದೇ ಇದ್ದರೆ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಲೂಬಹುದು.