Publish Date: Thu, 06 Apr 2023 (20:30 IST)
Updated Date: Thu, 06 Apr 2023 (18:13 IST)
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ನಟ ಕಿಚ್ಚ ಸುದೀಪ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬೆಂಬಲ ಮತ್ತು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆ ನಟ ಕಿಚ್ಚ ಸುದೀಪ್ ಅವರ ಚಲನಚಿತ್ರಗಳನ್ನು, ಟಿ.ವಿ.ಶೋಗಳನ್ನು ಮತ್ತು ಅವರು ಇರುವ ಜಾಹಿರಾತುಗಳ ಪ್ರದರ್ಶನಕ್ಕೆ ತಡೆ ಹಿಡಿಯಬೇಕೆಂದು ಶಿವಮೊಗ್ಗದ ವಕೀಲರೊಬ್ಬರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಕೀಲ ಕೆ.ಪಿ ಶ್ರೀಪಾಲ ಎಂಬುವರು ಪತ್ರದಲ್ಲಿ ಕನ್ನಡದ ಚಲನಚಿತ್ರ ನಟ ಕಿಚ್ಚ ಸುದೀಪ್ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿರುವುದರಿಂದ ಚುನಾವಣೆ ಮುಗಿಯುವವರೆಗೂ ಅವರ ನಟನೆಯ ಯಾವುದೇ ಚಲನಚಿತ್ರಗಳು ಚಿತ್ರಮಂದಿರಗಳಲ್ಲಿ ಮತ್ತು ಟಿವಿಗಳಲ್ಲಿ ಪ್ರದರ್ಶನವಾಗದಂತೆ, ಅವರು ನಡೆಸಿಕೊಡುವ ಟಿ.ವಿ ಶೋಗಳು ಪ್ರಸಾರವಾಗದಂತೆ ಮತ್ತು ನಟಿಸಿರುವ ಜಾಹಿರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು. ಅವರು ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವುದನ್ನು ಅವರೇ ಘೋಷಣೆ ಮಾಡಿದ್ದರಿಂದ ಅವರ ನಟನೆಯ ಚಲನಚಿತ್ರಗಳು, ಟಿ.ವಿ ಶೋಗಳು ಹಾಗೂ ಜಾಹಿರಾತುಗಳು ಮತದಾರರ ಮೇಲೆ ಪ್ರಭಾವ ಬೀರುವುದರಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ತಕ್ಷಣದಿಂದ ಚುನಾವಣಾ ಆಯೋಗ ಈ ವಿಷಯಕ್ಕೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಳ್ಳುವಂತೆ ವಕೀಲ ಕೆ.ಪಿ ಶ್ರೀಪಾಲ ಅವರು ಒತ್ತಾಯಿಸಿದ್ದಾರೆ.