ಬೆಂಗಳೂರು: ಕನ್ನಡದಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿರುವ ಸು ಫ್ರಮ್ ಸೋ ಸಿನಿಮಾ ಈಗ ಮಲಯಾಳಂನಲ್ಲೂ ಮೋಡಿ ಮಾಡುತ್ತಿದೆ. ಇನ್ನು, ಕರ್ನಾಟಕದಲ್ಲಿ ಟಿಕೆಟ್ ಮಾರಾಟ ವಿಚಾರದಲ್ಲಿ ನಿನ್ನೆ ದಾಖಲೆಯನ್ನೇ ಮಾಡಿದೆ.
ಕೇವಲ ಬಾಯಿ ಮಾತಿನ ಪ್ರಚಾರದಿಂದಲೇ ಸ್ಟಾರ್ ನಟರಿಲ್ಲದಿದ್ದರೂ ಗೆದ್ದ ಸಿನಿಮಾ ಸು ಫ್ರಮ್ ಸೋ. ಕೇವಲ 5 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾದ ಸಿನಿಮಾ ಈಗ 23 ಕೋಟಿ ರೂ. ಹೆಚ್ಚು ಗಳಿಕೆ ಮಾಡಿದೆ. ನಿನ್ನೆ ಸಿನಿಮಾ ಮಲಯಾಳಂ ಭಾಷೆಯಲ್ಲೂ ಬಿಡುಗಡೆಯಾಗಿತ್ತು.
ಮಲಯಾಳಂ ಮೂಲದ ಪ್ರಕಾರ ಸು ಫ್ರಮ್ ಸೋ ಸಿನಿಮಾ ಅಲ್ಲೂ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಒಂದೊಳ್ಳೆ ಸಿನಿಮಾ ಎಂದು ಜನ ಮೆಚ್ಚಿಕೊಂಡಿದ್ದು ಥಿಯೇಟರ್ ಗೆ ಜನ ಬರಲು ಆಸಕ್ತಿ ತೋರಿಸುತ್ತಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳು ಪರಭಾಷೆಗೆ ಹೋಗಿ ಹಿಟ್ ಆಗುವುದು ಇದೆ. ಆದರೆ ಸ್ಟಾರ್ ಗಳಿಲ್ಲದೇ ಇದ್ದರೂ ಸಿನಿಮಾ ಪರಭಾಷೆಯಲ್ಲೂ ಬಿಡುಗಡೆಯಾಗಿರುವುದೇ ವಿಶೇಷ.
ಇನ್ನು, ಕನ್ನಡದಲ್ಲಿ ನಿನ್ನೆ ಗಂಟೆಗೆ 11 ಸಾವಿರ ಟಿಕೆಟ್ ಮಾರಾಟವಾಗಿ ಹೊಸ ದಾಖಲೆ ಮಾಡಿದೆ. ಇದಕ್ಕೆ ಮೊದಲು ಕಿಚ್ಚ ಸುದೀಪ್ ನಾಯಕರಾಗಿದ್ದ ಮ್ಯಾಕ್ಸ್ ಸಿನಿಮಾ ಗಂಟೆಗೆ 9 ಸಾವಿರ ಟಿಕೆಟ್ ಮಾರಾಟವಾಗಿತ್ತು. ಇದೀಗ ಸು ಫ್ರಮ್ ಸೋ ಆ ದಾಖಲೆಯನ್ನೂ ಮುರಿದಿದೆ. ಇಂದೂ ಕೂಡಾ ಚಿತ್ರದ ಟಿಕೆಟ್ ಬಿಸಿ ದೋಸೆಯಂತೆ ಖಾಲಿಯಾಗುತ್ತಿದೆ. ನಾಳೆ ಭಾನುವಾರವಾಗಿದ್ದು ನಾಳೆಯೂ ಟಿಕೆಟ್ ಗೆ ಡಿಮ್ಯಾಂಡ್ ಹೆಚ್ಚಲಿದೆ.