Publish Date: Thu, 09 Nov 2023 (09:40 IST)
Updated Date: Thu, 09 Nov 2023 (09:52 IST)
ಬೆಂಗಳೂರು: ಕನ್ನಡ ಪ್ರೇಕ್ಷಕರು ಎಂದೆಂದಿಗೂ ಮರೆಯಲಾಗದ ಮಾಣಿಕ್ಯ ದಿವಂಗತ ಶಂಕರ್ ನಾಗ್ ಅವರ ಜನ್ಮ ಜಯಂತಿ ಇಂದು.
1954 ರಲ್ಲಿ ಹೊನ್ನಾವರದಲ್ಲಿ ಜನಿಸಿದ ಶಂಕರ್ ನಾಗ್ ಚಿಕ್ಕ ವಯಸ್ಸಿನಲ್ಲೇ ಅನೇಕ ಸಾಧನೆ ಮಾಡಿ ರಸ್ತೆ ಅಪಘಾತದಲ್ಲಿ 36 ನೇ ವಯಸ್ಸಿಗೇ ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದರು. ನಟನಾಗಿ ನಿರ್ದೇಶಕನಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದ ಪ್ರತಿಭಾವಂತ. ಸದಾ ಕ್ರಿಯಾಶೀಲರಾಗಿರುತ್ತಿದ್ದ ಶಂಕರ್ ಕೇವಲ ಸಿನಿಮಾ ಮಾತ್ರವಲ್ಲದೆ, ಬೆಂಗಳೂರಿನ ಅಭಿವೃದ್ಧಿ ಬಗ್ಗೆಯೂ ಅನೇಕ ಕನಸು ಕಂಡವರು. ಈಗ ಯಶಸ್ವಿಯಾಗಿ ಓಡಾಡುತ್ತಿರುವ ನಮ್ಮ ಮೆಟ್ರೋ ಪರಿಕಲ್ಪನೆ ಬಗ್ಗೆ ಬಹಳ ಹಿಂದೆಯೇ ಹೇಳಿದವರು.
ಒಂದಾನೊಂದು ಕಾಲದಲ್ಲಿ ಅವರು ನಟಿಸಿದ ಮೊದಲ ಸಿನಿಮಾ. ಮಿಂಚಿನ ಓಟ ಅವರ ಮೊದಲ ನಿರ್ದೇಶನದ ಸಿನಿಮಾ. ಒಂದು ಮುತ್ತಿನ ಕತೆ ಸಿನಿಮಾದಲ್ಲಿ ಮೊದಲ ಬಾರಿಗೆ ಅಂಡರ್ ವಾಟರ್ ಶೂಟಿಂಗ್ ತಂತ್ರಜ್ಞಾನ ಅಳವಡಿಸಿದ ಕೀರ್ತಿ ಅವರದ್ದು. ಮಾಲ್ಗುಡಿ ಡೇಸ್ ಟಿವಿ ಸರಣಿ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಆಟೋ ರಾಜ ಸಿನಿಮಾ ಮೂಲಕ ಆಟೋ ಚಾಲಕರಿಗೆ ನೆಚ್ಚಿನ ಅಣ್ಣನಾದರು. ಇಂದಿಗೂ ಶಂಕರ್ ನಾಗ್ ಎಂದರೆ ಸಾಮಾನ್ಯ ಪ್ರೇಕ್ಷಕರಲ್ಲಿ ಅಪಾರ ಅಭಿಮಾನ ಹಾಗೆಯೇ ಉಳಿದಿದೆ.