ಕಾವೇರಿ ನದಿ ಕುರಿತಂತೆ ಸತ್ಯರಾಜ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಸತ್ಯರಾಜ್ ನಟಿಸಿರುವ ಬಾಹುಬಲಿ-2 ಚಿತ್ರ ಬಿಡುಗಡೆಗೆ ಬಿಡುವುದಿಲ್ಲ. ಸತ್ಯರಾಜ್ ಕ್ಷಮೆ ಕೇಳಲೇಬೇಕು ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ.
ಈ ಬಗ್ಗೆ ರಾಜಮೌಳಿ ಬಿಡುಗಡೆ ಮಾಡಿರುವ ವಿಡಿಯೋ ಕುರಿತಂತೆ ಪ್ರತಿಕ್ರಿಯಿಸಿರುವ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು, ರಾಜಮೌಳಿ ಕ್ಷಮೆ ಕೇಳುವ ಅಗತ್ಯವಿಲ್ಲ. ರಾಜಮೌಳಿ ಬಗ್ಗೆ ನಮಗೆ ಅಪಾರ ಗೌರವವಿದೆ. ಒಂದು ರಾಜ್ಯದಲ್ಲಿ ಸಿನಿಮಾ ನಿರ್ದೇಶಕ ಆಗದಿದ್ದರೆ ನಿರ್ದೇಶಕನಿಗೆ ಆಗುವ ನೋವು ನನಗೆ ಗೊತ್ತಾಗುತ್ತೆ. ಸತ್ಯರಾಜ್ ಹೇಳಿಕೆ ತಪ್ಪು ಎಂದು ನೀವು ಹೇಳಬೇಕಿತ್ತು. ಸತ್ಯರಾಜ್ ಕ್ಷಮೆ ಕೇಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸತ್ಯರಾಜ್ ನಮ್ಮ ನೆಲದ ಮೇಲೆ ಕಾಲಿಡುವುದು ಬೇಡ. ಕ್ಷಮೆ ಕೇಳಿದ ವಿಡಿಯೋ ಮಾಡಿ ಕಳುಹಿಸಿದರೆ ಸಾಕು. ಹೋರಾಟ ಹಿಂಪಡೆಯುವುದಾಗಿ ಸಾ.ರಾ. ಗೋವಿಂದು ಹೇಳಿದ್ದಾರೆ.
ಇತ್ತ, ಚಿತ್ರದುರ್ಗದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಇದು ಸ್ವಾಭಿಮಾನದ ಪ್ರಶ್ನೆ, ಸತ್ಯರಾಜ್ ಕ್ಷಮೆ ಕೇಳಲೇಬೇಕು. ಏಪ್ರಿಲ್ 28ಕ್ಕೆ ಚಿತ್ರ ಬಿಡುಗಡೆ ದಿನ ಬೆಂಗಳೂರು ಬಂದ್`ಗೆ ಕರೆ ನೀಡುವುದಾಗಿ ಹೇಳಿದ್ದಾರೆ.