Publish Date: Sat, 05 Sep 2020 (10:09 IST)
Updated Date: Sat, 05 Sep 2020 (10:11 IST)
ಬೆಂಗಳೂರು: ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗಡೆ ತಮ್ಮ ಮೇಲೆ ಎಚ್ ಎಸ್ ಆರ್ ಲೇಔಟ್ ಪಾರ್ಕ್ ಒಂದರಲ್ಲಿ ಹಾಡ ಹಗಲೇ ಹಲ್ಲೆ ಮಾಡಲಾಗಿದೆ ಎಂದು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿದ್ದಾರೆ.
ತಮ್ಮ ಸ್ನೇಹಿತರೊಂದಿಗೆ ಪಾರ್ಕ್ ನಲ್ಲಿ ವರ್ಕೌಟ್ ಮಾಡುವಾಗ ಮಹಿಳೆಯೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ಪ್ರಶ್ನಿಸಿದಾಗ ಹೊಡೆಯಲು ಬಂದಿದ್ದಲ್ಲದೆ, ‘ಈ ರೀತಿ ತುಂಡು ಬಟ್ಟೆ ಹಾಕಿಕೊಂಡು ಹೊರಗಡೆ ಓಡಾಡಿಕೊಂಡಿರ್ತೀರಲ್ಲಾ? ನೀವು ಹುಡುಗೀರಾ ಇಲ್ಲಾ ಕ್ಯಾಬರೆ ಡ್ಯಾನ್ಸರಾ ಎಂದು ಪ್ರಶ್ನಿಸಿದ್ದಾರೆ. ನಾಳೆ ಏನಾದರೂ ನಿಮ್ಮ ಮೇಲೆ ಕಿರುಕುಳ ನಡೆದರೆ ಅತ್ತು ಕರೆದು ಮಾಡಬೇಡಿ. ಇಂಥಾ ಡ್ರೆಸ್ ಹಾಕಿಕೊಂಡು ತಿರುಗುವುದಕ್ಕೇ ನಿಮ್ಮಂತಹವರಿಗೆ ಹೀಗಾಗುತ್ತಿದೆ’ ಎಂದು ಮಹಿಳೆ ಆಕ್ಷೇಪಿಸಿದ್ದಾರೆ.
ಅಷ್ಟರಲ್ಲಿ ಅಲ್ಲಿ ಸುಮಾರು 10 ಜನರ ಯುವಕರ ಗುಂಪು ಕೂಡಾ ಸೇರಿದ್ದು, ಅವರೂ ನಿಮ್ಮನ್ನು ಡ್ರಗ್ಸ್ ಕೇಸ್ ನಲ್ಲಿ ಫಿಕ್ಸ್ ಮಾಡಿಸ್ತೀವಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂಯುಕ್ತಾ ಆರೋಪಿಸಿದ್ದಲ್ಲದೆ, ಇಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬೆಂಗಳೂರು ನಗರ ಪೊಲೀಸರನ್ನು ಆಗ್ರಹಿಸಿದ್ದಾರೆ.