ಬೆಂಗಳೂರು: ಕನ್ನಡಿಗರಿಗೆ ಅವಹೇಳನ ಮಾಡಿ ಮಾತನಾಡಿದ್ದಾರೆಂಬ ಕಾರಣಕ್ಕೆ ತಮಿಳು ನಟ ಸತ್ಯರಾಜ್ ಕ್ಷಮೆ ಯಾಚಿಸುವವರೆಗೂ ಬಾಹುಬಲಿ 2 ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡಲ್ಲ ಎನ್ನುತ್ತಿರುವ ಕನ್ನಡ ಸಂಘಟನೆ ಬಗ್ಗೆ ಟೀಕಿಸಿದ ವ್ಯಕ್ತಿಯ ವಿರುದ್ಧ ನಿರ್ಮಾಪಕ ಸಾ ರಾ ಗೋವಿಂದು ದೂರು ನೀಡಿದ್ದಾರೆ.
ಪ್ರಶಾಂತ್ ಸಂಭರ್ಗಿ ಎನ್ನುವವರು, ಬಾಹುಬಲಿ ಸಿನಿಮಾ ಬಿಡುಗಡೆಗೆ ವಿರೋಧಿಸುತ್ತಿರುವ ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾ ರಾ ಗೋವಿಂದು ಇಷ್ಟೆಲ್ಲಾ ಮಾಡುತ್ತಿರುವುದು ಹಣಕ್ಕಾಗಿ ಎಂದು ಫೇಸ್ ಬುಕ್ ನಲ್ಲಿ ಆರೋಪಿಸಿದ್ದರು.
ಈ ಬಗ್ಗೆ ಸಾ ರಾ ಗೋವಿಂದು ಹೈ ಗ್ರೌಂಡ್ ಠಾಣೆ ಪೊಲೀಸರಿಗೆ ಪ್ರಶಾಂತ್ ವಿರುದ್ಧ ದೂರು ದಾಖಲಿಸಿದ್ದಾರೆ. ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ತಮಿಳು ನಟ ಶರತ್ ಕುಮಾರ್ ಗೆ ರಾಜಕುಮಾರ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ಅವರಿಗೆ ಯಾವುದೇ ತೊಂದರೆ ಮಾಡಲಿಲ್ಲವೆಂದ ಮೇಲೆ ಬಾಹುಬಲಿಗೆ ಯಾಕೆ ತಕರಾರು ಎಂದು ಪ್ರಶಾಂತ್ ಪ್ರಶ್ನಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ