ಮುಂಬೈ: ಬಾಲಿವುಡ್ ಹಿರಿಯ ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದಿರುವ ದಾಳಿ ದೇಶದಾದ್ಯಂತ ಸಂಚಲನ ಮೂಡಿಸಿದೆ. ಘಟನೆ ಕುರಿತು ಹಬ್ಬಿರುವ ವದಂತಿಗಳ ಕುರಿತು ಅವರ ಪತ್ನಿ, ನಟಿ ಕರೀನಾ ಕಪೂರ್ ಮೌನ ಮುರಿದಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ದಂಪತಿಯ ಮನೆಯಲ್ಲಿ, ಸೈಫ್ ಅವರ ಗುರುವಾರ ಮುಂಜಾನೆ ಚಾಕುವಿನಿಂದ ದಾಳಿ ಮಾಡಲಾಗಿದೆ. ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿರುವ ಸೈಫ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಟನ ಮೇಲೆ ದಾಳಿ ಮಾಡಿದ ದುಷ್ಕರ್ಮಿಯು ಕಳ್ಳತನಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಆತನ ಪತ್ತೆಗಾಗಿ ಮುಂಬೈ ಪೊಲೀಸರು 20ಕ್ಕೂ ಅಧಿಕ ತಂಡಗಳನ್ನು ರಚಿಸಿದ್ದಾರೆ.
ಇದು ತಮ್ಮ ಪಾಲಿಗೆ ಅತ್ಯಂತ ಸವಾಲಿನ ಸಮಯ. ಪ್ರತಿಯೊಬ್ಬರೂ ವದಂತಿಗಳು ಹಾಗೂ ವರದಿಗಳಿಂದ ಅಂತರ ಕಾಯ್ದುಕೊಳ್ಳಿ ಎಂದು ಕರೀನಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಕೋರಿದ್ದಾರೆ.
ನಮ್ಮ ಕುಟುಂಬವು ಊಹಿಸಿಕೊಳ್ಳುವುದಕ್ಕೂ ಅಸಾಧ್ಯವೆನಿಸುವಂತಹ ಸವಾಲಿನ ದಿನವನ್ನು ಎದುರಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ನಾನು ತೊಡಗಿದ್ದೇವೆ. ಈ ಕಷ್ಟದ ಸಮಯವನ್ನು ದಾಟಿ ಮುಂದಕ್ಕೆ ಹೋಗಲು ಪ್ರಯತ್ನಿಸುತ್ತಿದ್ದು, ಮಾಧ್ಯಮಗಳು, ಛಾಯಾಗ್ರಾಹಕರು ವದಂತಿಗಳಿಂದ ದೂರ ಇರುವಂತೆ ಹಾಗೂ ಅವುಗಳನ್ನು ಪ್ರಸಾರ ಮಾಡದಂತೆ ಗೌರವಪೂರ್ವಕವಾಗಿ ವಿನಂತಿಸುತ್ತೇವೆ ಎಂದು ಮನವಿ ಮಾಡಿದ್ದಾರೆ.
ನಿಮ್ಮ ಕಾಳಜಿ ಹಾಗೂ ಬೆಂಬಲವನ್ನು ಗೌರವಿಸುತ್ತೇವೆ. ನಿರಂತರವಾಗಿ ನಮ್ಮತ್ತಲೇ ಗಮನ ಕೇಂದ್ರೀಕರಿಸುತ್ತಿರುವುದು ನಮ್ಮ ಸುರಕ್ಷತೆಗೂ ಅಪಾಯವನ್ನುಂಟುಮಾಡಲಿದೆ. ದಯವಿಟ್ಟು ನಮ್ಮ ಎಲ್ಲೆಯನ್ನು ಗೌರವಿಸಿ. ಚೇತರಿಸಿಕೊಳ್ಳಲು ಅವಕಾಶ ನೀಡಿ. ಕುಟುಂಬವಾಗಿ ಸಹಕರಿಸಿ ಎಂದು ಮನವಿ ಮಾಡುತ್ತೇನೆ ಎಂಬುದಾಗಿ ಬರೆದುಕೊಂಡಿದ್ದಾರೆ.