ಮಾನ್ವಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ನಟ ಸಲ್ಮಾನ್ ಖಾನ್ ಹಾಗೂ ಅವರ ಸಿನಿಮಾದ ಗೀತೆ ರಚನೆಕಾರನಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಮಾನ್ವಿ ಪಟ್ಟಣದ ಸೊಹೆಲ್ ಪಾಷಾ ಎನ್ನುವವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮಾನ್ವಿ ಪಟ್ಟಣದ ವಾರ್ಡ್ ನಂ 5, ಶಾದಿ ಮಹಲ್ ಹತ್ತಿರದ ನಿವಾಸಿ, ಯುವಕ ಸೊಹೆಲ್ ಪಾಷಾ ನವೆಂಬರ್ 7ರಂದು ಮುಂಬೈ ನಗರದ ಪೊಲೀಸರ ವಾಟ್ಸಪ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, 'ನನಗೆ ₹5 ಕೋಟಿ ನೀಡದಿದ್ದರೆ, ಸಲ್ಮಾನ್ ಖಾನ್ ಮತ್ತು ಮೈ ಸಿಕಂದರ್ ಹೂಂ ಗೀತೆಯ ರಚನೆಕಾರನನ್ನು ಕೊಲ್ಲುವೆ ಎಂದು ಬೆದರಿಕೆ ಹಾಕಿದ್ದನು ಎನ್ನಲಾಗಿದೆ.
ಗೀತರಚನೆಕಾರ ಇನ್ನು ಮುಂದೆ ಹಾಡುಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ. ಸಲ್ಮಾನ್ ಖಾನ್ ಅವರಿಗೆ ಧೈರ್ಯವಿದ್ದರೆ ಅವರನ್ನು ಉಳಿಸಿ ಎಂದು ಬೆದರಿಕೆ ಸಂದೇಶವನ್ನು ವಾಟ್ಸಪ್ ಮೂಲಕ ಕಳುಹಿಸಿದ್ದ ಎಂದು ಗೊತ್ತಾಗಿದೆ.
ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಪೋನ್ ಸಂಖ್ಯೆಯ ಮಾಹಿತಿಯೊಂದಿಗೆ ತನಿಖೆ ಚುರುಕುಗೊಳಿಸಿದ ಮುಂಬೈ ನಗರದ ಅಪರಾಧ ವಿಭಾಗದ ಪೊಲೀಸರು ಮಾನ್ವಿ ಪಟ್ಟಣಕ್ಕೆ ಆಗಮಿಸಿ ಒಂದು ವಾರ ಕಾಲ ಸ್ಥಳೀಯ ವಸತಿ ಗೃಹವೊಂದರಲ್ಲಿ ಮೊಕ್ಕಾಂ ಹೂಡಿ ಆರೋಪಿ ಪತ್ತೆಗೆ ಜಾಲ ಬೀಸಿದ್ದರು.
ಬೆದರಿಕೆ ಕರೆಗೆ ಬಳಸಿದ ಫೋನ್ ನಂಬರ್ ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದ ವೆಂಕಟೇಶ ನಾರಾಯಣ ಎಂಬುವವರಿಗೆ ಸೇರಿದ್ದನ್ನು ಪತ್ತೆ ಹಚ್ಚಿದ್ದರು. ವೆಂಕಟೇಶ ನಾರಾಯಣ ಅವರನ್ನು ವಿಚಾರಣೆಗೊಳಪಡಿಸಿದಾಗ ಅವರ ಫೋನ್ ಗೆ ಇಂಟರ್ನೆಟ್ (ಡಾಟಾ) ಬಳಕೆಯಲ್ಲಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದರು.
ಬಂಧಿತ ಯುವಕ ಸೊಹೈಲ್ ಪಾಷಾನನ್ನು ಮುಂಬೈಗೆ ಕರೆದೊಯ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.