ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಚ್ಚು ಅಭಿಮಾನಿಯೊಬ್ಬ ನಾಳೆ ಅವರ ಜನ್ಮದಿನಕ್ಕೆ ರಜೆ ಕೋರಿ ಪ್ರಾಂಶುಪಾಲರಿಗೇ ಪತ್ರ ಬರೆದಿರುವ ಘಟನೆ ಬಳ್ಳಾರಿಯ ಕಾಲೇಜೊಂದರಲ್ಲಿ ನಡೆದಿದೆ.
ಕೆ.ಶಿವಕುಮಾರ್ ಎಂಬ ವಿದ್ಯಾರ್ಥಿ ರಾಕಿ ಭಾಯಿ ಅಪ್ಪಟ ಅಭಿಮಾನಿ. ಜನವರಿ 8 ರಂದು ಯಶ್ ಹುಟ್ಟುಹಬ್ಬವಿದೆ. ಕೊರೋನಾ ಕಾರಣದಿಂದ ಯಶ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.
ನಾಳೆ ಸಂಜೆಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳು ಹುಟ್ಟುಹಬ್ಬದ ಟ್ರೆಂಡ್ ಶುರು ಮಾಡಲಿದ್ದಾರೆ. ಹೀಗಾಗಿ ಸ್ನೇಹಿತರೊಂದಿಗೆ ಸೇರಿ ಯಶ್ ಹುಟ್ಟುಹಬ್ಬ ಆಚರಿಸಬೇಕು. ರಜೆ ಕೊಡಿ ಎಂದು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ. ಅಷ್ಟೇ ಅಲ್ಲ, ನೀವೂ ವಿಶ್ ಮಾಡಿ ಎಂದು ಪ್ರಿನ್ಸಿಪಾಲರಿಗೇ ಬಿಟ್ಟಿ ಸಲಹೆಯನ್ನೂ ಕೊಟ್ಟಿದ್ದಾನೆ! ಈ ಪತ್ರ ಈಗ ವೈರಲ್ ಆಗಿದೆ.