ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಐದು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದರಿಂದ ದರ್ಶನ್, ಪವಿತ್ರಾ ಗೌಡ ಸೇರಿದಂತೆ 16 ಮಂದಿ ಆರೋಪಿಗಳನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲಾಯಿತು.
ಪ್ರಕರಣ ಸಂಬಂಧ ಇಂದು 42ನೇ ಎಸಿಎಂಎಂ ನ್ಯಾಯಾಲಯ ವಿಚಾರಣೆ ನಡೆಸಿತು. ಕೊಲೆ ಆರೋಪ ಎದುರಿಸುತ್ತಿರುವವರ ಪೈಕಿ 12 ಆರೋಪಿಗಳನ್ನು 5 ದಿನಗಳ ಕಾಲ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಪರ ವಕೀಲರು ತಮ್ಮ ವಾದವನ್ನು ಮಂಡಿಸಿದ್ದರು.
ಪವಿತ್ರಾ ಗೌಡ ಪರ ವಕೀಲರು ನಾರಾಯಣಸ್ವಾಮಿ ಹಾಗೂ ದರ್ಶನ್ ಪರ ವಕೀಲರಾದ ಅನಿಲ್ ಬಾಬು ನ್ಯಾಯಾಧೀಶರ ಮುಂದೆ ನ್ಯಾಯಾಂಗ ಬಂಧನ ನೀಡಬೇಕು ಎಂದು ವಾದವನ್ನು ಮಂಡಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಕೂಡ ಇನ್ನೂ ಆರೋಪಿಗಳ ವಿಚಾರಣೆ ನಡೆಯಬೇಕಿದೆ. ಹೀಗಾಗಿ ಕಾಲಾವಕಾಶ ಬೇಕು. ಈ ಕಾರಣಕ್ಕಾಗಿ ಇನ್ನೂ ಎಂಟು ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಹೇಳಿದ್ದರು.