ಹೈದರಾಬಾದ್: ಎಂಗೇಜ್ ಮಾಡಿಕೊಂಡಿದ್ದಾರೆ ಎನ್ನಲಾಗಿರುವ ಟಾಲಿವುಡ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಡೇಟ್ ಈಗ ಬಹಿರಂಗವಾಗಿದೆ.
ಮೂಲಗಳ ಪ್ರಕಾರ ಇಬ್ಬರೂ ಫೆಬ್ರವರಿ 26 ರಂದು ಮದುವೆಯಾಗುತ್ತಿದ್ದಾರೆ. ಮದುವೆ ವಿಚಾರವನ್ನು ಇದುವರೆಗೂ ಈ ಜೋಡಿ ಗುಟ್ಟಾಗಿಯೇ ಇಟ್ಟಿದೆ. ಮೂಲಗಳ ಪ್ರಕಾರ ಕೇವಲ ಆಪ್ತೇಷ್ಟರು ಮಾತ್ರ ಮದುವೆಗೆ ಬರಲಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳಂತೆ ಉದಯಪುರದಲ್ಲಿ ತೀರಾ ಖಾಸಗಿಯಾಗಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಇತ್ತೀಚೆಗಷ್ಟೇ ಎಂಗೇಜ್ ಮೆಂಟ್ ಮಾಡಿಕೊಂಡ ಸುದ್ದಿ ಹರಿದಾಡಿತ್ತು. ಅಧಿಕೃತವಾಗಿ ರಶ್ಮಿಕಾ ಈ ವಿಚಾರವನ್ನು ಬಹಿರಂಗಪಡಿಸದೇ ಇದ್ದರೂ ಅವರ ಕೈಯಲ್ಲಿ ಮಿನುಗುತ್ತಿರುವ ಉಂಗುರ ಇದನ್ನು ಸಾರಿ ಹೇಳುತ್ತಿದೆ.
ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ರಾಜಸ್ಥಾನದ ಉದಯಪುರದಲ್ಲಿ ಮದುವೆಯಾಗಿದ್ದರು. ಇದೀಗ ರಶ್ಮಿಕಾ ಕೂಡಾ ಅಲ್ಲೇ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ರಶ್ಮಿಕಾ ಒಪ್ಪಿಕೊಂಡಿರುವ ಸಿನಿಮಾ ಕೆಲಸಗಳನ್ನು ಮುಗಿಸಿಕೊಡಲಿದ್ದಾರೆ. ಅದಾದ ಬಳಿಕ ವಿಜಯ್ ಜೊತೆ ಹಸೆಮಣೆ ಏರಲಿದ್ದಾರೆ.