ಟ್ರೇಲರ್ ಮೂಲಕ ಪ್ರೇಕ್ಷಕರ ಮನಗೆದ್ದ ರಂಗನಾಯಕಿ!

ಗುರುವಾರ, 5 ಸೆಪ್ಟಂಬರ್ 2019 (18:02 IST)
ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬಂದಿರೋ ರಂಗನಾಯಕಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈವರೆಗೂ ಹಗ್ಗದ ಕೊನೆ, ತ್ರಯಂಬಕಂ ಚಿತ್ರಗಳ ಮೂಲಕ ಅಪರೂಪದ ಕಥೆಗಳೊಂದಿಗೆ ಗಮನ ಸೆಳೆದಿದ್ದ ನಿರ್ದೇಶಕ ದಯಾಳ್. ಈ ಬಾರಿ ಅವರು ಈ ಹಿಂದಿನ ಚಿತ್ರಗಳಿಗಿಂತಲೂ ಭಿನ್ನವಾದ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆಂಬುದಕ್ಕೆ ಇದೀಗ ಬಿಡುಗಡೆಯಾಗಿರೋ `ರಂಗನಾಯಕಿ’ ಟ್ರೇಲರ್ ಸಾಕ್ಷಿಯಾಗಿ ನಿಂತಿದೆ.
ಅದಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ನಟಿಸಿರುವ ರಂಗನಾಯಕಿ ಮಹಿಳಾ ಪ್ರಧಾನ ಚಿತ್ರ. ವ್ಯಾಲ್ಯೂಮ್ 1 ವರ್ಜಿನಿಟಿ ಎಂಬ ಟ್ಯಾಗ್ ಲೈನ್ ಹೊಂದಿರೋ ಈ ಚಿತ್ರ ಅತ್ಯಾಚಾರಕ್ಕೀಡಾದ ಹುಡುಗಿಯೊಬ್ಬಳು ಈ ಸಮಾಜವನ್ನು ಎದುರಿಸುವಂಥಾ ಸೂಕ್ಷ್ಮ ಸಂವೇದನೆಯ ಕಥಾ ಹಂದರವನ್ನೊಳಗೊಂಡಿದೆ. ಸಾಮಾನ್ಯವಾಗಿ ಇಂಥಾ ಅತ್ಯಾಚಾರ ಪ್ರಕರಣಗಳು ಸಂಭವಿಸಿದಾಗ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲೂ ಹಿಂಜರಿಯುತ್ತಾರೆ. ಆದರೆ ಈ ರಂಗನಾಯಕಿ ಬೇರೆಯದ್ದೇ ಮನಸ್ಥಿತಿ ಹೊಂದಿರುವಾಕೆ. ಯಾಕೆಂದರೆ ಈ ಚಿತ್ರದಲ್ಲಿ ಅತ್ಯಾಚಾರಕ್ಕೀಡಾದ ಹುಡುಗಿ ಆ ಆಘಾತದ ನಡುವೆಯೂ ತಾನೇ ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುತ್ತಾಳೆ.
 
ಈ ವಿದ್ಯಮಾನದ ಸುತ್ತ ಘಟಿರೋ ವಿಭಿನ್ನ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎಂಬ ಭರವಸೆಯನ್ನ ಈ ಟ್ರೇಲರ್ ಹೊಮ್ಮಿಸಿದೆ. ಎಸ್ ವಿ ನಾರಾಯಣ್ ನಿರ್ಮಾಣ ಮಾಡಿರೋ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಜೊತೆ ಎಂ ಜಿ ಶ್ರೀನಿವಾಸ್ ಮತ್ತು ತ್ರಿವಿಕ್ರಂ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರಂಗನಾಯಕಿ ಮೂಲಕವೂ ನವೀನ್ ಕೃಷ್ಣ ಸಂಭಾಷಣೆಕಾರರಾಗಿ ದಯಾಳ್ರಿಗೆ ಸಾಥ್ ಕೊಟ್ಟಿದ್ದಾರೆ. ತಾಂತ್ರಿಕತೆ, ಮೇಕಿಂಗ್ ಸೇರಿದಂತೆ ಎಲ್ಲದರಲ್ಲಿಯೂ ರಂಗನಾಯಕಿ ರಿಚ್ ಆಗಿ ಮೂಡಿ ಬಂದಿದೆ ಅನ್ನೋದನ್ನೂ ಕೂಡಾ ಈ ಟ್ರೇಲರ್ ಸಾಬೀತುಗೊಳಿಸಿದೆ. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರೋ ಈ ಚಿತ್ರ ಶೀಘ್ರದಲ್ಲಿಯೇ ತೆರೆ ಕಾಣಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಧೂಳೆಬ್ಬಿಸಿದೆ ಪೈಲ್ವಾನ್ ಧ್ರುವತಾರೆ ಹಾಡು!