ರಾಂಧವನಿಗೂ ಶ್ರೀಲಂಕೆಗೂ ಇದೆಂಥಾ ನಂಟು?

ಮಂಗಳವಾರ, 13 ಆಗಸ್ಟ್ 2019 (16:09 IST)
ಭುವನ್ ಪೊನ್ನಣ್ಣ ನಾಯಕನಾಗಿ ನಟಿಸಿರೋ ರಾಂಧವ ಚಿತ್ರದ ಹಿನ್ನೆಲೆಯಲ್ಲಿ ವಿಶೇಷತೆ ಮತ್ತು ಬೆರಗುಗಳ ಸಂತೆಯೇ ನೆರೆದಿದೆ. ಅದರಲ್ಲಿಯೂ ಈ ಕಥೆಯ ಬಗ್ಗೆ ನಿರ್ದೇಶಕ ಸುನೀಲ್ ಆಚಾರ್ಯ ಈವರೆಗೆ ಬಿಟ್ಟುಕೊಟ್ಟಿರೋ ಒಂದಷ್ಟು ವಿಚಾರಗಳಂತೂ ನಿಜಕ್ಕೂ ರೋಚಕವಾಗಿವೆ. ಅವುಗಳ ಸಾಲಿನಲ್ಲಿ ರಾಂಧವನ ಕಥೆಗೂ ದೂರದ ದೇಶ ಶ್ರೀಲಂಕೆಗೂ ಇರುವ ನಂಟಿನ ಕಥೆಯೂ ಸೇರಿಕೊಂಡಿದೆ.
ರಾಂಧವನದ್ದೊಂದು ವಿರಳವಾದ, ವಿಶೇಷವಾದ ಕಥೆ ಎಂಬ ಸುಳಿವು ಈಗಾಗಲೇ ಸಿಕ್ಕಿ ಬಿಟ್ಟಿದೆ. ಆದರೆ ಇದರ ಒಂದೆಳೆ ಕಥೆಗೂ ಶ್ರೀಲಂಕಾದ ಮಹಾ ಕಾವ್ಯವೊಂದಕ್ಕೂ ನೇರಾ ನೇರಾ ನಂಟಿದೆ. ನಮ್ಮಲ್ಲಿ ರಾಮಾಯಣ, ಮಹಾಭಾರತದಂಥಾ ಮಹಾ ಕಾವ್ಯಗಳಿದ್ದಾವಲ್ಲಾ? ಅದರಂತೆಯೇ ಶ್ರೀಲಂಕಾದಲ್ಲ್ಲಿಯೂ ಇಂಥಾದ್ದೇ ಮಹಾಕಾವ್ಯವಿದೆಯಂತೆ. ಆ ದೇಶದಲ್ಲಿ ಪೂಜ್ಯನೀಯ ಭಾವ ಹೊಂದಿರೋ ಆ ಮಹಾಕಾವ್ಯದ ಒಂದೆಳೆಯೊಂದಿಗೆ ರಾಂಧವನ ಕಥೆ ಹೊಸೆಯಲಾಗಿದೆಯಂತೆ.
ಹಾಗಂತ ಈ ಚಿತ್ರವೇನು ಆ ಮಹಾಕಾವ್ಯಾಧಾರಿತವಲ್ಲ. ಅದರಲ್ಲಿ ಮಜವಾದ ಒಂದೆಳೆ ಮಾತ್ರ ಇಲ್ಲಿದೆ. ಆ ಕಥೆಯಲ್ಲಿ ಗೂಬೆ ಸೇರಿದಂತೆ ನಾನಾ ಸೆಳೆತಗಳಿವೆ. ರಾಂಧವನೆಂಬೋ ರಾಜನ ಆಸ್ಥಾನ ಮತ್ತು ಅದರ ಆಚೀಚೆ ನಡೆಯೋ ವಿದ್ಯಮಾನಗಳು ಕೂಡಾ ಮಾಮೂಲಿ ಪೌರಾಣಿಕ ಕಥೆಗಳಿಗಿಂತಲೂ ವಿಭಿನ್ನವಾಗಿದೆ. ಇಂಥಾ ಕಥಾ ಎಳೆಯಲ್ಲಿಯೇ ಮೂರು ಶೇಡಿನ ಪಾತ್ರಗಳು ಬಿಚ್ಚಿಕೊಳ್ಳುತ್ತವೆ. ಅದರಂತೆ ಭುವನ್ ರಾಣಾ, ರಾಜ ರಾಂಧವ ಮತ್ತು ರಾಬರ್ಟ್ ಎಂಬ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಒಂದೆಳೆಯ ಸುಳಿವೇ ಇಷ್ಟು ಮಜವಾಗಿರುವಾಗ ಇಡೀ ಚಿತ್ರ ಅದೆಂಥಾ ಮುದ ನೀಡಬಹುದೆಂಬುದು ಯಾರಿಗಾದರೂ ಅರ್ಥವಾಗುವಂತಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ರಾಂಧವ ನೈಜ ಸಾಹಸ ನಿಪುಣ!