ವರನಟ ಡಾ. ರಾಜ್ ಕುಮಾರ್ ಅಭಿನಯಿಸಿರುವ ಪಾತ್ರವನ್ನು ಮತ್ತೊಬ್ಬ ನಟ ಪೋಷಿಸಬೇಕು ಎಂದರೆ ಅದು ಅಸಾಧ್ಯವಾದ ಮಾತು. ಈಗಿನ ತಲೆಮಾರಿನ ಬಹಳಷ್ಟು ಹೀರೋಗಳಿಗೆ ಆ ರೀತಿ ಅಭಿನಯಿಸಬೇಕೆಂಬ ಆಸೆ ಇದ್ದರೂ ಆ ಸಾಹಸಕ್ಕೆ ಕೈಹಾಕಲು ಸಾಧ್ಯವಾಗದೆ ಹಿಂದಡಿ ಇಡುತ್ತಾರೆ.
ಅಣ್ಣಾವ್ರ ಅಭಿಮಾನಿಯಾಗಿ ಸಾಕಷ್ಟು ಜನ ನಟರು ಸಕ್ಸಸ್ ಆಗಿದ್ದಾರೆ. ತಾಜಾ ಸಮಾಚಾರದ ಪ್ರಕಾರ, ರಜನಿಕಾಂತ್ ಅಭಿಮಾನಿಯಾಗಿರುವ ರಾಘವ ಲಾರೆನ್ಸ್ ಆ ರೀತಿಯ ಪ್ರಯತ್ನಕ್ಕೆ ಸಿದ್ದವಾಗುತ್ತಿದ್ದಾರೆ. ಅನುರಾಗ ಅರಳಿತು ಚಿತ್ರದ ರೀಮೇಕ್ ಆಗಿರುವ ’ಮನ್ನನ್’ ನಲ್ಲಿ ಅಭಿನಯಿಸಲಿದ್ದಾರೆ. ರಜನಿಕಾಂತ್, ವಿಜಯಶಾಂತಿ, ಖುಷ್ಬೂ ಅಭಿನಯಿಸಿದ್ದ ಮನ್ನನ್ ಚಿತ್ರಕ್ಕೆ ಪಿ ವಾಸು ಆಕ್ಷನ್ ಕಟ್ ಹೇಳಿದ್ದರು.
ಶಿವಾಜಿ ಫಿಲಂಸ್ ಲಾಂಛನದಲ್ಲಿ 1992ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸೂಪರ್ ಹಿಟ್ ಆಯಿತು. ತೆಲುಗು ಭಾಷೆಗೂ ರೀಮೇಕ್ ಆದ ಈ ಚಿತ್ರದಲ್ಲಿ ಚಿರಂಜೀವಿ, ನಗ್ಮಾ, ವಾಣಿವಿಶ್ವನಾಥ್ ಅಭಿನಯಿಸಿದ್ದಾರೆ. ಹಿಂದಿಯಲ್ಲಿ ಇದೇ ಚಿತ್ರ ಲಾಡ್ಲಾ ರೀಮೇಕ್ ಆಗಿದ್ದು ಅನಿಲ್ ಕಪೂರ್, ಶ್ರೀದೇವಿ, ರವೀನಾ ಟಂಡನ್ ಅಭಿನಯಿಸಿದ್ದಾರೆ.
ಇದೀಗ ಪಿ ವಾಸು ಅದೇ ಚಿತ್ರವನ್ನು ರೀಮೇಕ್ ಮಾಡಲು ಮುಂದಾಗಿದ್ದಾರೆ. ಈ ಕಾಲಕ್ಕೆ ತಕ್ಕಂತೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಸ್ಕ್ರಿಪ್ಟ್ ರೆಡಿ ಮಾಡಿದ್ದಾರೆ. ರಜನಿಕಾಂತ್ ಪೋಷಿಸಿದ್ದ ಪಾತ್ರವನ್ನು ಲಾರೆನ್ಸ್ ಪೋಷಿಸಲಿದ್ದಾರೆ. ನಯನತಾರಾ, ಖುಷ್ಬು ನಾಯಕಿಯರು. ಒಂದು ವೇಳೆ ನಯನತಾರಾ ಒಪ್ಪಲಿಲ್ಲ ಎಂದರೆ ತ್ರಿಷಾ ಎಂದುಕೊಂಡಿದೆ ಚಿತ್ರತಂಡ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.