ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಮುದ್ದು ಮಗಳು ಐರಾ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡಿ ಆಕೆ ಅಕ್ಷರಶಃ ಪುಟಾಣಿ ರಾಕಿಂಗ್ ಸ್ಟಾರ್ ಆಗಿದ್ದಾಳೆ.
ಇದೀಗ ರಾಧಿಕಾ ಪಂಡಿತ್ ಮಗಳು ತನ್ನ ತಂದೆ-ತಾಯಿಯ ಫೋಟೋ ಗುರುತಿಸುವ ಫನ್ನಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಕ್ಯೂಟ್ ವಿಡಿಯೋ ನೋಡಿ ಇಷ್ಟಪಟ್ಟ ಜನ ಒಂದು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಅದೇನೆಂದರೆ ವಿಡಿಯೋದಲ್ಲಿ ರಾಧಿಕಾ ತಮ್ಮ ಮಗಳಿಗೆ ಕೊಂಕಣಿ ಭಾಷೆಯಲ್ಲಿ ಮಾತನಾಡಿಸುತ್ತಿದ್ದರು. ಕೊಂಕಣಿ ರಾಧಿಕಾ ಮಾತೃಭಾಷೆ.
ಆದರೆ ಅಭಿಮಾನಿಗಳಿಗೆ ಯಾಕೋ ಇದು ಇಷ್ಟವಾಗಿಲ್ಲ. ಹೀಗಾಗಿ ಮಗುವಿಗೆ ಕನ್ನಡ ಕಲಿಸಿ ಎಂದು ಹಲವು ಕಾಮೆಂಟ್ ಮಾಡಿದ್ದರು. ಕಾಮೆಂಟ್ ಗಳಿಗೆ ರಾಧಿಕಾ ಸ್ಪಷ್ಟನೆ ನೀಡಿದ್ದು, ‘ನಮ್ಮ ಮಗಳಿಗೆ ನಾವು ಯಾವ ಭಾಷೆ ಕಲಿಸುತ್ತಿದ್ದೇವೆ ಎಂಬ ಬಗ್ಗೆ ಇರುವ ಗೊಂದಲಗಳಿಗೆ ಇಲ್ಲಿ ಸ್ಪಷ್ಟನೆ ಕೊಡುತ್ತಿದ್ದೇನೆ. ಐರಾ ಅವಳ ಅಮ್ಮನ ಮಾತೃಭಾಷೆ ಕೊಂಕಣಿ ಮತ್ತು ಅಪ್ಪನ ಮಾತೃಭಾಷೆ ಕನ್ನಡ ಮಾತನಾಡಿದರೂ ಚೆನ್ನಾಗಿ ಪ್ರತಿಕ್ರಿಯಿಸುತ್ತಾಳೆ’ ಎಂದಿದ್ದಾರೆ. ಈ ಮೂಲಕ ಎರಡೂ ಭಾಷೆಯನ್ನು ಆಕೆಗೆ ಕಲಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.