ಹೈದರಾಬಾದ್: ಡಿಸೆಂಬರ್ 4 ರಂದು ನಡೆದ ಪುಷ್ಪ 2 ಪ್ರೀಮಿಯರ್ ಪ್ರದರ್ಶನದ ವೇಳೆ ಕಾಲ್ತುಳಿತ ಪ್ರಕರಣ ಸಂಬಂಧ ನಕಲಿ ವೀಡಿಯೊವೊಂದು ಹರಿದಾಡುತ್ತಿದೆ. ಫೇಕ್ ವಿಡಿಯೋಗಳನ್ನು ಹರಿಬಿಡುವವರ ವಿರುದ್ಧ ಕಠಿಣ ಕ್ರಮಕ್ಕೆ ಜರುಗಿಸುವುದಾಗಿ ಹೈದರಾಬಾದ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೈಸ್‌ನ ಪ್ರೀಮಿಯರ್ ಸಮಯದಲ್ಲಿ ಆರ್‌ಟಿಸಿ ಎಕ್ಸ್ ರೋಡ್‌ನಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿದ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಈ ದುರಂತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ.
ಇದೀಗ ಈ ಸಂಬಂಧ ನಕಲಿ ವಿಡಿಯೋಗಳ ಪ್ರಸಾರದ ವಿರುದ್ಧ ಎಚ್ಚರಿಕೆ ನೀಡಿರುವ ಹೈದರಾಬಾದ್ ಪೊಲೀಸರು, ಅಲ್ಲು ಅರ್ಜುನ್ ಆಗಮನದ ಮೊದಲು ಕಾಲ್ತುಳಿತ ಸಂಭವಿಸಿದೆ ಎಂದು ಕೆಲವರು ಸುಳ್ಳು ವೀಡಿಯೊಗಳನ್ನು ಪೋಸ್ಟ್ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಘಟನೆಯ ತನಿಖೆಯ ವೇಳೆ ತಿಳಿದ ಸಂಗತಿಗಳನ್ನು ಪೊಲೀಸ್ ಇಲಾಖೆ ಈಗಾಗಲೇ ವಿಡಿಯೋ ರೂಪದಲ್ಲಿ ಸಾರ್ವಜನಿಕರ ಮುಂದಿಟ್ಟಿದೆ.
ಅಲ್ಲು ಅರ್ಜುನ್ ಆಗಮನಕ್ಕೂ ಮುನ್ನ ಕಾಲ್ತುಳಿತ ಸಂಭವಿಸಿದ ಪರಿಣಾಮ ಕೆಲವರನ್ನು ದಾರಿತಪ್ಪಿಸಲು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಿಡಿಯೋಗಳನ್ನು ಪೋಸ್ಟ್ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಕರಣದ ತನಿಖೆಯ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಮಾನಹಾನಿ ಮಾಡುವ ಸುಳ್ಳು ಪ್ರಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅಮಾಯಕ ಮಹಿಳೆಯ ಸಾವು ಮತ್ತು ಮಗುವಿನ ಜೀವಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಅತ್ಯಂತ ಬದ್ಧತೆಯಿಂದ ತನಿಖೆ ನಡೆಸುತ್ತಿದೆ.