ಬೆಂಗಳೂರು: ಕನ್ನಡದ ಖ್ಯಾತ ನಟಿ ಪ್ರಣೀತಾ ಸುಭಾಷ್ ಬಗ್ಗೆ ನಿಮಗೆ ಖಂಡಿತಾ ಗೊತ್ತಿರುತ್ತದೆ. ಆದರೆ ಅವರ ತಂದೆ ಡಾ ಸುಭಾಷ್ ನಿಜಕ್ಕೂ ರಿಯಲ್ ಲೈಫ್ ಹೀರೋ. ಅವರ ಬಗ್ಗೆ ತಿಳಿದುಕೊಂಡರೆ ನಿಜಕ್ಕೂ ಹೆಮ್ಮೆ ಪಡುತ್ತೀರಿ.
ಹಲವು ಸಿನಿಮಾಗಳಲ್ಲಿ ನಟಿಸಿ ಜನರಿಗೆ ಪರಿಚಿತರಾಗಿರುವ ನಟಿ ಪ್ರಣೀತಾ ಸುಭಾಷ್. ಆದರೆ ಆಕೆಯ ತಂದೆ ವೃತ್ತಿಯಲ್ಲಿ ವೈದ್ಯರು. ವೈದ್ಯರು ಎಂದ ಮಾತ್ರಕ್ಕೆ ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲ, ಅಗತ್ಯ ಬಿದ್ದಾಗ ರೋಗಿಗಳಿಗೆ ರಕ್ತದಾನ ಮಾಡಿ ಅವರ ಜೀವವುಳಿಸಲು ಸಹಾಯ ಮಾಡಿದ್ದಾರೆ.
ಡಾ. ಸುಭಾಷ್ ಈ ಮೊದಲು ಬನಶಂಕರಿಯ ಶ್ರೀಕೃಷ್ಣ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಸುಮಾರು ಒಂಭತ್ತು ವರ್ಷಗಳ ಹಿಂದೆ ಆಗ ಅವರಿಗೆ 57 ವರ್ಷವಾಗಿತ್ತು. ಆಗಲೇ ಅವರು 124 ಬಾರಿ ರಕ್ತದಾನ ಮಾಡಿ ದಾಖಲೆ ಮಾಡಿದ್ದರು. ರಾಷ್ಟ್ರೋತ್ಥಾನ ಕೇಂದ್ರದಲ್ಲಿ ಬಂದು ಪ್ರತೀ ವರ್ಷ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಅವರು ರಕ್ತದಾನ ಮಾಡುತ್ತಿದ್ದರು. ಇದು ಈಗಲೂ ಮುಂದುವರಿದಿದೆಯಂತೆ!
ಕೆಲವರಿಗೆ ರಕ್ತದಾನ ಮಾಡಲು ಏನೋ ಹಿಂಜರಿಕೆಯಿರುತ್ತದೆ. ಇದರಿಂದ ನಮಗೆ ಆರೋಗ್ಯ ಸಮಸ್ಯೆಯಾಗಿಬಿಟ್ಟರೆ, ನಮ್ಮ ದೇಹದಲ್ಲಿ ರಕ್ತದ ಕೊರತೆಯಾದರೆ ಎಂಬ ಭಯ. ಆದರೆ ವೃತ್ತಿಯಲ್ಲಿ ವೈದ್ಯರಾಗಿರುವ ಡಾ ಸುಭಾಷ್ ಪ್ರತೀ ವರ್ಷ ನಾಲ್ಕು ಬಾರಿ ರಕ್ತದಾನ ಮಾಡಿ ಹಲವರಿಗೆ ಮಾದರಿಯಾಗಿದ್ದಾರೆ.