Publish Date: Wed, 17 Jun 2026 (14:51 IST)
Updated Date: Wed, 17 Jun 2026 (14:54 IST)
ಬೆಂಗಳೂರು: ಧರ್ಮಸ್ಥಳ ವಿರುದ್ಧ ನನಗೆ ಯಾವುದೇ ಧ್ವೇಷವಿಲ್ಲ. ಆದರೆ ಚಿನ್ನಯ್ಯನಿಗೆ ನನ್ನ ಮುಂದೆ ಹೇಳಿದ ಸತ್ಯವನ್ನು ಎಲ್ಲರ ಎದುರು ಹೇಳು, ನಿನ್ನ ಅಪ್ಪಿಕೊಳ್ಳುತ್ತೇನೆ ಎಂದಿದ್ದು ನಿಜ ಎಂದು ನಟ ಪ್ರಕಾಶ್ ರಾಜ್ ಇಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಗಿರೀಶ್ ಮಟ್ಟೆಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಪ್ರಕಾಶ್ ರಾಜ್ ಸೇರಿದಂತೆ ಬುರುಡೆ ಪ್ರಕರಣದಲ್ಲಿ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡಲು 200 ಕೋಟಿ ರೂ. ಪ್ಲ್ಯಾನ್ ಮಾಡಿದ್ದರು ಎಂದು ಚಿನ್ನಯ್ಯ ಆರೋಪಿಸಿದ್ದ. ಈ ಬಗ್ಗೆ ಇಂದು ಪ್ರಕಾಶ್ ರಾಜ್ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಇದಕ್ಕೆ ಮೊದಲು ಪತ್ರಕರ್ತರನ್ನು ಆಹ್ವಾನಿಸುವಾಗ ಮಾರಿಕೊಂಡ ಪತ್ರಕರ್ತರಿಗೂ ಆಹ್ವಾನ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಅದೇ ವಿಚಾರವಾಗಿ ಇಂದು ಪತ್ರಿಕಾಗೋಷ್ಠಿಗೆ ಮುನ್ನ ಕೆಲವು ಹೊತ್ತು ಪತ್ರಕರ್ತರು ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದರು. ಅಲ್ಲದೆ ಪತ್ರಕರ್ತರನ್ನು ಮಾರಿಕೊಂಡ ಪತ್ರಕರ್ತರು ಎಂದಿದ್ದಕ್ಕೆ ಆಕ್ರೋಶವೂ ಎದುರಾಯಿತು.
ಬಳಿಕ ಚಿನ್ನಯ್ಯ ಆರೋಪದ ಬಗ್ಗೆ ಮಾತನಾಡಿದ ಪ್ರಕಾಶ್ ರಾಜ್ ಚಿನ್ನಯ್ಯನಿಗೆ ನನ್ನ ಮುಂದೆ ಹೇಳಿದ ಸತ್ಯವನ್ನು ಎಸ್ಐಟಿ ಮುಂದೆ ಹೇಳು. ಸತ್ಯ ಹೇಳಿದರೆ ಊರೇ ಕೊಂಡಾಡುತ್ತದೆ. ನಾನು ನಿನ್ನ ತಬ್ಬಿಕೊಳ್ತೀನಿ ಎಂದಿದ್ದೆ. ಈ ಪ್ರಕರಣದಲ್ಲಿ 200 ಕೋಟಿ ರೂ ಹಗರಣ ನಡೆದಿದೆ ಎನ್ನುತ್ತಿದ್ದಾರೆ. 200 ಕೋಟಿ ರೂ ನಾನು ಎಲ್ಲಿಂದ ತರಲಿ? ನಾನು ಇದುವರೆಗೆ ಚಿನ್ನಯ್ಯ ಅಥವಾ ಗಿರೀಶ್ ಮಟ್ಟೆಣ್ಣನವರ್ ಅವರನ್ನು ಭೇಟಿಯೇ ಆಗಿಲ್ಲ ಎಂದಿದ್ದಾರೆ.
ಧರ್ಮಸ್ಥಳದ ವಿರುದ್ಧ ನನಗೆ ಯಾವುದೇ ಧ್ವೇಷವಿಲ್ಲ. ಕ್ಷೇತ್ರದ ಮೇಲೆ ಅಪವಾದ ಹೊರಿಸುತ್ತಿಲ್ಲ. ಆದರೆ ಅಲ್ಲಿ ನಡೆದ ಸಾವಿನ ಬಗ್ಗೆ ಪ್ರಶ್ನೆ ಮಾಡಬಾರದೇ? ಸೌಜನ್ಯ ಹೇಗೆ ಸತ್ತಳು, ಉಳಿದ ಹೆಣ್ಣು ಮಕ್ಕಳ ಸಾವು ಹೇಗಾಯಿತು ಎಂದು ಪ್ರಶ್ನೆ ಮಾಡಿದ್ದೇನೆಯೇ ಹೊರತು ಕ್ಷೇತ್ರದ ವಿರುದ್ಧ ಅಲ್ಲ ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ