ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ದರ್ಶನ್ ತೂಗುದೀಪ ಅವರಿಗೆ ಒಂದೇ ಸಮಸ್ಯೆ ಎದುರಾಗಿದೆ.
ಎ1 ಆರೋಪಿ ಪವಿತ್ರಾ ಗೌಡಗೆ ನ್ಯಾಯಾಲಯ ದಿನಕ್ಕೆ ಒಂದು ಹೊತ್ತು ಮನೆ ಊಟ ಕೊಡಲು ಅವಕಾಶ ನೀಡಿತ್ತು. ಆದರೆ ಜೈಲು ಅಧಿಕಾರಿಗಳು ಬೇರೆಯವರೂ ಇದನ್ನೇ ಕೇಳುತ್ತಾರೆ ಎಂದು ಅವಕಾಶ ನೀಡಿಲ್ಲ. ಹೀಗಾಗಿ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಸ್ಥಿತಿ ಪವಿತ್ರಾ ಗೌಡರದ್ದು ಆಗಿತ್ತು.
ಇದೀಗ ಪವಿತ್ರಾ ಗೌಡರದ್ದೇ ಸಮಸ್ಯೆ ಗೆ ದರ್ಶನ್ ಗೂ ಎದುರಾಗಿದೆ. ನಟ ದರ್ಶನ್ ಗೆ ಬ್ಲಾಂಕೆಟ್ ನೀಡಲು ಕೋರ್ಟ್ ಏನೋ ಅನುಮತಿ ನೀಡಿತ್ತು. ಆದರೆ ಜೈಲು ಅಧಿಕಾರಿಗಳು ಈ ಅವಕಾಶ ನೀಡಿಲ್ಲ. ಹೊಸದಾಗಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿಯಾಗಿ ಬಂದಿರುವ ಅಲೋಕ್ ಕುಮಾರ್ ಕೆಲವು ಖಡಕ್ ನಿಯಮಗಳನ್ನು ಹಾಕಿದ್ದಾರೆ.
ಅದರಂತೆ ಜೈಲಿನ ನಿಯಮದ ಪ್ರಕಾರ ಎಲ್ಲಾ ಕೈದಿಗಳಿಗೂ ಒಂದೇ ರೀತಿಯ ಬ್ಲಾಂಕೆಟ್ ನೀಡಬೇಕು ಎಂದು ನಿಯಮ ಮಾಡಿದ್ದಾರೆ. ಇದರಿಂದಾಗಿ ವಿಐಪಿ, ಸಾಮಾನ್ಯ ಕೈದಿಗಳು ಎನ್ನದೇ ಎಲ್ಲರಿಗೂ ಒಂದೇ ರೀತಿಯ ಬ್ಲಾಂಕೆಟ್ ನೀಡಬೇಕಾಗುತ್ತದೆ. ಹೀಗಾಗಿ ವಿಶೇಷ ಸೌಲಭ್ಯಗಳಿಗೆ ಅವಕಾಶವಿರಲ್ಲ.