ತಿರುವನಂತಪುರಂ: ಒಲವಿನ ಉಡುಗೊರೆ ಕೊಡಲೇನು ಎಂಬ ಹಾಡು ಹಾಡಿ ಕನ್ನಡಿಗರನ್ನು ರಂಜಿಸಿದ್ದ ಕೇರಳ ಮೂಲದ ಗಾಯಕ ಪಿ ಜಯಚಂದ್ರನ್ ಇನ್ನಿಲ್ಲ.
80 ವರ್ಷ ವಯಸ್ಸಿನ ಪಿ ಜಯಚಂದ್ರನ್ ಕಳೆದ ಕೆಲವು ಸಮಯದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರ ಸಾವಿಗೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಜಯಚಂದ್ರನ್ ಮಲಯಾಳಂ, ತಮಿಳು, ತೆಲುಗು, ಕನ್ನಡ ಸೇರಿದಂತೆ ಸುಮಾರು 16 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಮಲಯಾಳಂನಲ್ಲಂತೂ ಯೇಸುದಾಸ್ ಬಳಿಕ ಅವರೇ ಒಂದು ಕಾಲದಲ್ಲಿ ಹಿಟ್ ಹಾಡುಗಳ ಸರದಾರರಾಗಿದ್ದವರು. ಕನ್ನಡದಲ್ಲೂ ಕೆಲವು ಹಾಡುಗಳನ್ನು ಜಯಚಂದ್ರನ್ ಹಾಡಿದ್ದು ಎಲ್ಲವೂ ಸೂಪರ್ ಹಿಟ್ ಹಾಡುಗಳೇ ಎನ್ನುವುದು ವಿಶೇಷ.
ಕನ್ನಡದಲ್ಲಿ ಪಿ ಜಯಚಂದ್ರನ್ ಹಾಡಿದ ಹಾಡುಗಳೆಂದರೆ ಒಲವಿನ ಉಡುಗೊರೆ ಕೊಡಲೇನು, ಮಂದಾರ ಪುಷ್ಪವು ನೀನೇ, ಹಿಂದೂಸ್ಥಾನವು ಎಂದೂ ಮರೆಯದ, ಚಂದ ಚಂದ ಗುಲಾಬಿ ತೋಟವು, ಮಾನಸ ಸರೋವರ ಹಾಡುಗಳು ಸೇರಿವೆ. ಮಲಯಾಳಂ ಒಂದೇ ಭಾಷೆಯಲ್ಲಿ 15 ಸಾವಿರ ಹಾಡು ಹಾಡಿದ ಕೀರ್ತಿ ಅವರದ್ದಾಗಿದೆ. ಇದೀಗ ದಿಗ್ಗಜ ಕಲಾವಿದ ನೆನಪು ಮಾತ್ರ.