ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದಿಲೀಪ್ ಗೆ ಮತ್ತೊಮ್ಮೆ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, ಇನ್ನೂ ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಹಸ್ತಾಂತರಿಸಿದೆ.
ಇನ್ನೂ ಪ್ರಕರಣಕ್ಕೆ ಮುಖ್ಯವಾದ ಸಾಕ್ಷಿಯಾಗಿರುವ ಮೊಬೈಲ್ ಫೋನ್, ಹಾಗೂ ಇನ್ನಿತರ ಸಾಕ್ಷಿಗಳನ್ನು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ. ದಿಲೀಪ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆಂಬ ಆರೋಪಗಳನ್ನು ಸಾಬೀತುಪಡಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಹಾಗಿದ್ದರೂ ದಿಲೀಪ್ ಗೆ ಜಾಮೀನು ನಿರಾಕರಿಸಿದ್ದರ ಹಿಂದೆ ಅವರ ಸಹೋದರ ಅನೂಪ್ ನಿನ್ನೆಯಷ್ಟೇ ನೀಡಿದ್ದ ಒಂದು ಹೇಳಿಕೆ ಕಾರಣವಾಯಿತೇ ಎಂಬ ಸಂಶಯಗಳು ಮೂಡಿವೆ.
ಅನೂಪ್ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ‘ನನ್ನ ಸಹೋದರ ಒಮ್ಮೆ ಹೊರಗೆ ಬರಲಿ. ನಂತರ ಏನು ಮಾಡಬೇಕೋ ಮಾಡುತ್ತೇವೆ’ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದು ಅವರಿಗೆ ಮುಳುವಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾಕ್ಷಿಗಳ ನಾಶಕ್ಕೆ ದಿಲೀಪ್ ಮುಂದಾಗಬಹುದು ಎಂದು ನ್ಯಾಯಾಲಯ ಲೆಕ್ಕಾಚಾರ ಹಾಕಿರಬಹುದು ಎಂದು ಅಂದಾಜಿಸಲಾಗಿದೆ.
ನಟನ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಧೀಶರು ‘ಒಂದು ವೇಳೆ ಜಾಮೀನು ನೀಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ’ ಎಂದಿದ್ದಾರೆ. ಜಾಮೀನು ನಿರಾಕರಣೆಯಾದ ಹಿನ್ನಲೆಯಲ್ಲಿ ದಿಲೀಪ್ ಇನ್ನೂ ಒಂದು ದಿನ ಪೊಲೀಸ್ ಸುಪರ್ದಿಯಲ್ಲಿರಬೇಕಾಗುತ್ತದೆ. ದಿಲೀಪ್ ಹೊರ ಬರುತ್ತಿದ್ದಂತೆ ಮಾಧ್ಯಮಗಳು ಅವರ ಹೇಳಿಕೆ ಪಡೆಯಲು ಯತ್ನಿಸಿದರೂ ಅವರು ಯಾವುದೇ ಹೇಳಿಕೆ ನೀಡಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ