Publish Date: Tue, 06 Oct 2026 (11:02 IST)
Updated Date: Tue, 06 Oct 2026 (11:09 IST)
ಚಿತ್ರದುರ್ಗ: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅಭಿನಯದ 'ಬೇಲ್' ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ, ಚಿತ್ರತಂಡದೊಂದಿಗೆ ಶಿವಣ್ಣ ಅವರು ಕೋಟೆನಾಡು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾರ್ಯಕ್ರಮವೊಂದರಲ್ಲಿ ಸಂಭವಿಸಿದ ದಿಢೀರ್ ಪಟಾಕಿ ಅವಘಡದಿಂದ ನಟ ಶಿವರಾಜ್‌ಕುಮಾರ್ ಅವರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಆಗಿದ್ದೇನು?
ಚಿತ್ರದುರ್ಗ ನಗರದ ಖಾಸಗಿ ಶೋರೂಮ್ ಒಂದರ ಬಳಿ ಸುದ್ದಿಗೋಷ್ಠಿ ಹಾಗೂ ಅಭಿಮಾನಿಗಳ ಭೇಟಿಗಾಗಿ ಶಿವಣ್ಣ ಆಗಮಿಸುತ್ತಿದ್ದಂತೆ, ಅವರಿಗೆ ಅದ್ಧೂರಿ ಸ್ವಾಗತ ಕೋರಲು ಅಭಿಮಾನಿಗಳು ಹೂವಿನ ಕುಂಡ (ಫ್ಲವರ್ ಪಾಟ್) ಪಟಾಕಿಗಳನ್ನು ಸಿಡಿಸಿದರು. ಈ ಸಂದರ್ಭದಲ್ಲಿ ಶಿವಣ್ಣ ಅವರ ತೀರಾ ಹತ್ತಿರದಲ್ಲೇ ಪಟಾಕಿಯೊಂದು ಹಠಾತ್ತಾಗಿ ಭಾರಿ ಸದ್ದು ಮಾಡಿ ಸ್ಫೋಟಗೊಂಡಿತು.
ಸಡನ್ ಆಗಿ ನಡೆದ ಈ ಘಟನೆಯಿಂದ ಶಿವರಾಜ್‌ಕುಮಾರ್, ಅವರ ಭದ್ರತಾ ಸಿಬ್ಬಂದಿ ಹಾಗೂ ಸ್ಥಳದಲ್ಲಿದ್ದ ಸಂಘಟಕರು ಕೆಲ ಕ್ಷಣಗಳ ಕಾಲ ಆಘಾತಕ್ಕೆ ಒಳಗಾದರು. ಸ್ಥಳದಲ್ಲಿದ್ದವರು ಕೂಡಲೇ ಜಾಗರೂಕರಾಗಿ ಶಿವಣ್ಣ ಅವರನ್ನು ಶೋರೂಮ್ ಒಳಗೆ ಕರೆದೊಯ್ದರು. ಶಿವಣ್ಣ ಅವರಿಗೆ ಯಾವುದೇ ಗಾಯಗಳಾಗದೆ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟರು.
ಬೇಲ್' ಒಂದು ಸಂಪೂರ್ಣ ಫ್ಯಾಮಿಲಿ ಎಂಟರ್‌ಟೈನರ್:
ಘಟನೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅತ್ಯಂತ ಸಂಯಮದಿಂದಲೇ ಮಾತನಾಡಿದ ಶಿವರಾಜ್‌ಕುಮಾರ್, ತಮ್ಮ 'ಬೇಲ್' ಸಿನಿಮಾಗೆ ಪ್ರೇಕ್ಷಕರಿಂದ ಸಿಗುತ್ತಿರುವ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದ ತಿಳಿಸಿದರು.
"ಬೇಲ್ ಸಿನಿಮಾಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೊಂದು ಕುಟುಂಬ ಸಮೇತ ಕುಳಿತು ನೋಡಬಹುದಾದ ಅತ್ಯುತ್ತಮ 'ಫ್ಯಾಮಿಲಿ ಎಂಟರ್‌ಟೈನರ್'. ಸಿನಿಮಾಗಳನ್ನು ಬಿಗ್ ಬಜೆಟ್ ಅಥವಾ ಸ್ಮಾಲ್ ಬಜೆಟ್ ಎಂದು ಅಳೆಯಬಾರದು. ಕೋಟ್ಯಂತರ ರೂಪಾಯಿ ಸುರಿದು ಸಿನಿಮಾ ನಿರ್ಮಿಸಿದ ತಕ್ಷಣವೇ ಅದು ಗೆಲ್ಲುತ್ತದೆ ಎಂಬುದು ಬರೀ ಭ್ರಮೆ. ಚಿತ್ರದ ಕಥೆ ಸರಳವಾಗಿರಬೇಕು ಮತ್ತು ಪ್ರೇಕ್ಷಕರ ಮನಸ್ಸಿಗೆ ತಲುಪುವಂತಿರಬೇಕು," ಎಂದು ಶಿವಣ್ಣ ಅಭಿಪ್ರಾಯಪಟ್ಟರು.
ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ