Publish Date: Thu, 23 Nov 2023 (09:21 IST)
Updated Date: Thu, 23 Nov 2023 (09:26 IST)
ಹೈದರಾಬಾದ್: ಟಾಲಿವುಡ್ ನಟ, ಅಕ್ಕಿನೇನಿ ಕುಟುಂಬದ ಮುದ್ದಿನ ಕುಡಿ ನಾಗಚೈತನ್ಯಗೆ ಇಂದು ಜನ್ಮದಿನ. ನಾಗ ಇಂದು 37 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.
ಅಕ್ಕಿನೇನಿ ಕುಟುಂಬದ ಮುದ್ದಿನ ಕುಡಿ ನಾಗಚೈತನ್ಯ 14 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಪ್ರತೀ ಸಿನಿಮಾಗೆ 10-12 ಕೋಟಿ ಸಂಭಾವನೆ ಪಡೆಯುತ್ತಾರೆ. ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 170 ಕೋಟಿ ರೂ. ಎನ್ನಲಾಗಿದೆ.
ಸಮಂತಾ ಋತು ಪ್ರಭು ಜೊತೆ ಪ್ರೀತಿಸಿ ಮದುವೆಯಾಗಿದ್ದ ನಾಗಚೈತನ್ಯ ನಾಲ್ಕೇ ವರ್ಷಕ್ಕೆ ವಿಚ್ಛೇದನ ನೀಡಿದ್ದರು. 2021 ರಲ್ಲಿ ಈ ಜೋಡಿ ಬೇರೆಯಾದಾಗ ಅವರಿಗಿಂತ ಹೆಚ್ಚು ಅವರ ಅಪ್ಪಟ ಅಭಿಮಾನಿಗಳು ಬೇಸರಗೊಂಡಿದ್ದರು. ಅಲ್ಲಿಯವರೆಗೆ ಉತ್ತುಂಗದಲ್ಲಿದ್ದ ನಾಗಚೈತನ್ಯ ವೃತ್ತಿ ಬದುಕೂ ಸಮಂತಾ ಬಿಟ್ಟು ಹೋದ ಮೇಲೆ ಮಂಕಾಯಿತು.
2021 ರಲ್ಲಿ ಸಮಂತಾರಿಂದ ದೂರವಾದ ಬಳಿಕ ಲವ್ ಸ್ಟೋರಿ ಬಿಡುಗಡೆಯಾಗಿ ತಕ್ಕಮಟ್ಟಿಗೆ ಯಶಸ್ಸು ಪಡೆದಿತ್ತು. ಅದಾದ ಬಳಿಕ ಬಂಗರಾಜು, ಥ್ಯಾಂಕ್ಯೂ, ಲಾಲ್ ಸಿಂಗ್ ಛಡ್ಡಾ, ಕಸ್ಟಡಿ ಹೇಳಿಕೊಳ್ಳುವಷ್ಟು ಯಶಸ್ಸು ಕೊಟ್ಟಿಲ್ಲ. ಸದ್ಯಕ್ಕೆ ಅವರ ಕೈಯಲ್ಲಿ ಎರಡು ಸಿನಿಮಾಗಳಿವೆ. ಮುಂದಿನ ದಿನಗಳಲ್ಲಿ ಯಶಸ್ಸು ಕೈ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.