ಹೈದರಾಬಾದ್: ಇತ್ತೀಚೆಗೆ ನಟಿ ತ್ರಿಶಾ ಕೃಷ್ಣನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಲಿಯೋ ಸಹ ನಟ ಮನ್ಸೂರ್ ಅಲಿ ಖಾನ್ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಮೌನ ಮುರಿದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುವಾಗ ಮನ್ಸೂರ್ ಅಲಿ ಖಾನ್, ಲಿಯೋ ಸಿನಿಮಾದಲ್ಲಿ ತ್ರಿಶಾ ನಾಯಕಿ ಎಂದು ತಿಳಿದಾಗ ಖುಷಿಯಾಯಿತು. ಆಕೆ ಜೊತೆ ಬೆಡ್ ರೂಂ ಅಥವಾ ರೇಪ್ ದೃಶ್ಯವಿರುತ್ತದೆ ಎಂದು ಭಾವಿಸಿದ್ದೆ. ಆದರೆ ಇಡೀ ಸಿನಿಮಾದಲ್ಲಿ ನನಗೆ ತ್ರಿಶಾ ಮುಖವನ್ನೇ ತೋರಿಸಲಿಲ್ಲ ಎಂದು ಹೇಳಿದ್ದರು.
ಅವರ ಈ ಹೇಳಿಕೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸ್ವತಃ ತ್ರಿಶಾ ಈ ಹೇಳಿಕೆಯನ್ನು ಖಂಡಿಸಿದ್ದರು. ಇದೀಗ ಮೆಗಾಸ್ಟಾರ್ ಚಿರಂಜೀವಿ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಮನ್ಸೂರ್ ಅಲಿ ಖಾನ್ ನಟಿ ತ್ರಿಶಾ ಬಗ್ಗೆ ನೀಡಿದ್ದ ಹೇಳಿಕೆ ನನ್ನ ಗಮನ ಸೆಳೆಯಿತು. ಒಬ್ಬ ಕಲಾವಿದನಿಗೆ ಮಾತ್ರವಲ್ಲ ಈ ಹೇಳಿಕೆ ಮಹಿಳೆ ಅಥವಾ ಹುಡುಗಿಯರಿಗೆ ಮಾಡಿದ ಅವಮಾನ. ಇಂತಹ ಹೇಳಿಕೆಗಳನ್ನು ಪ್ರಬಲವಾಗಿ ವಿರೋಧಿಸಬೇಕು. ಈ ವಿಚಾರದಲ್ಲಿ ತ್ರಿಶಾ ಮಾತ್ರವಲ್ಲದೆ, ಇಂತಹ ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರ ಪರವಾಗಿ ನಾನು ನಿಲ್ಲುತ್ತೇನೆ ಎಂದಿದ್ದಾರೆ.